ಮೈಸೂರು, ಏ.4: ಜಿಲ್ಲೆಯ ನಂಜನಗೂಡಿನ
ಕಂಪನಿಯೊಂದರ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ಮಾಡಿ 98.52 ಕೋಟಿ ಮೊತ್ತದ ಬಿಯರ್ ಸೀಜ್ ಮಾಡಿದ್ದಾರೆ.
ನಂಜನಗೂಡು ತಾಲೂಕು ಇಮ್ಮಾವು ಗ್ರಾಮದ ತಾಂಡ್ಯಾ ಪ್ರದೇಶದಲ್ಲಿರುವ ಯುನೈಟೆಡ್ ಬ್ರೆವರೀಸ್ ಕಂಪನಿ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 98.52 ಕೋಟಿ ಮೊತ್ತದ ಬಿಯರ್, ಕಚ್ಚಾ ವಸ್ತುಗಳನ್ನ ವಶಪಡಿಸಿಕೊಂಡಿದ್ದಾರೆ.
ದಾಳಿ ವೇಳೆ 17 ಮಂದಿ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಾಮರಾಜನಗರ ಲೋಕಸಭಾ ಕ್ಷೇತ್ರದ ಹಾಗೂ ಮೈಸೂರು ಜಿಲ್ಲೆ ವ್ಯಾಪ್ತಿಯ ತಾಂಡ್ಯಾ ಕೈಗಾರಿಕಾ ಪ್ರದೇಶದಲ್ಲಿರುವ ಯುನೈಟೆಡ್ ಬ್ರೆವರೀಸ್ ಕಂಪನಿಯಲ್ಲಿ ಅಕ್ರಮ ಬಿಯರ್ ದಾಸ್ತಾನು ಪತ್ತೆ ಆಗಿದೆ.
ಚಾಮರಾಜನಗರ ಜಿಲ್ಲಾಧಿಕಾರಿಗಳು ಹಾಗೂ ಲೋಕಸಭಾ ಚುನಾವಣಾಧಿಕಾರಿಗಳ ಕಚೇರಿಗೆ ಬಂದ ಅನಾಮಧೇಯ ಕರೆ ಮೇರೆಗೆ ಅಬಕಾರಿ ಇಲಾಖೆ ಉಪಾಯುಕ್ತರ ನೇತೃತ್ವದಲ್ಲಿ ಈ ದಾಳಿ ನಡೆದಿದೆ.
ಲೆಕ್ಕಪುಸ್ತಕಗಳಿಗೂ ದಾಸ್ತಾನಿಗೆ ಹೋಲಿಕೆ ಆಗದ ಹಿನ್ನಲೆ ಕಚ್ಚಾವಸ್ತುಗಳನ್ನ ಜಪ್ತಿ ಮಾಡಲಾಗಿದೆ.
7000 ವಿವಿಧ ಬ್ರಾಂಡಿನ ರೆಟ್ಟಿನಪೆಟ್ಟಿಗೆಗಳ ಬಿಯರ್ ದಾಸ್ತಾನು, 6,03,644 ರೆಟ್ಟಿನಪೆಟ್ಟಿಗೆಗಳು,ಕೆಗ್ ಗಳಲ್ಲಿ 23,160 ಲೀಟರ್,ಬಿಬಿಟಿ ಟ್ಯಾಂಕ್ ನಲ್ಲಿ 5,16,700 ಲೀಟರ್,ಯು.ಟಿ.ಟ್ಯಾಂಕ್ ನಲ್ಲಿ 66,16,700 ಲೀಟರ್, ಸ್ಟೆಲೋಸ್ ಟ್ಯಾಂಕ್ ನಲ್ಲಿ 6,50,458 ಕೆಜಿ ಕಚ್ಚಾವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ.
ಜಪ್ತಿಯಾದ ಒಟ್ಟು ಪದಾರ್ಥಗಳ ಮೌಲ್ಯ 98.52 ಕೋಟಿ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದು,ಪರಾರಿಯಾದ 17 ಆರೋಪಿಗಳ ಪತ್ತೆಗೆ ಚಾಮರಾಜನಗರ ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.