Sat. Mar 14th, 2026

ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಜಾಲದ ಮೇಲೆ ದಾಳಿ: ವಿವಿದೆಡೆ ಪ್ರಕರಣ ದಾಖಲು

Share this with Friends

ಬೆಂಗಳೂರು: ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ದಂಧೆಯ ವಿರುದ್ಧ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಮರ ಸಾರಿದೆ. ರಾಜ್ಯದ ವಿವಿಧೆಡೆ ದಾಳಿ ನಡೆಸಿರುವ ಅಧಿಕಾರಿಗಳು, ಅಕ್ರಮ ರೀಫಿಲ್ಲಿಂಗ್‌ನಲ್ಲಿ ತೊಡಗಿದ್ದ ಗ್ಯಾಸ್ ಏಜೆನ್ಸಿಗಳ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಸಚಿವ ಕೆ.ಹೆಚ್.ಮುನಿಯಪ್ಪ ಅವರ ಕಟ್ಟುನಿಟ್ಟಿನ ಸೂಚನೆಯ ಮೇರೆಗೆ ನಡೆದ ಈ ಕಾರ್ಯಾಚರಣೆಯಲ್ಲಿ, ಬೆಂಗಳೂರಿನ ಪಿಣ್ಯದಲ್ಲಿ 45 ಹಾಗೂ ಚಿಕ್ಕಜಾಲದಲ್ಲಿ 209 ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದೇ ರೀತಿ ಶಿವಮೊಗ್ಗ (3), ಯಾದಗಿರಿ (46), ಮತ್ತು ದಾವಣಗೆರೆಯಲ್ಲಿ (13) ಅಗತ್ಯ ವಸ್ತುಗಳ ಕಾಯ್ದೆ 1955ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಕೋಲಾರ ಜಿಲ್ಲೆಯ ಕೆ.ಜಿ.ಎಫ್‌ನಲ್ಲಿ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ಏಜೆನ್ಸಿಯ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗಿದೆ.

ಆದ್ಯತೆಯ ಮೇರೆಗೆ ವಾಣಿಜ್ಯ ಸಿಲಿಂಡರ್ ವಿತರಣೆ:

ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಶೇ. 20ರಷ್ಟು ವಾಣಿಜ್ಯ ಸಿಲಿಂಡರ್‌ಗಳನ್ನು ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ವಿಮಾನ ನಿಲ್ದಾಣ, ರೈಲು ಮತ್ತು ಬಸ್ ನಿಲ್ದಾಣದ ಕ್ಯಾಂಟೀನ್‌ಗಳು, ಪ್ರಮುಖ ದೇವಸ್ಥಾನಗಳು ಹಾಗೂ ವೃದ್ಧಾಶ್ರಮಗಳಿಗೆ ಆದ್ಯತೆಯ ಮೇಲೆ ವಿತರಿಸಲು ಇಲಾಖೆ ನಿರ್ದೇಶನ ನೀಡಿದೆ.

ಇನ್ನು ರಾಜ್ಯಾದ್ಯಂತ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ ಎಂದು ಸ್ಪಷ್ಟಪಡಿಸಿರುವ ಇಲಾಖೆ, ಇಂದು ಒಂದೇ ದಿನ 3,86,363 ಗೃಹಬಳಕೆ ಹಾಗೂ 6,371 ವಾಣಿಜ್ಯ ಬಳಕೆಯ ಸಿಲಿಂಡರ್‌ಗಳನ್ನು ವಿತರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

 


Share this with Friends

Related Post