ಹಾಸನ,ಜು.19: ಜಿಲ್ಲೆಯಲ್ಲಿ 11,000 ಕೋಟಿ ಯೋಜನೆಯ 9 ರಿಂದ 10 ರೈಲ್ವೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ರೈಲ್ವೆ ಇಲಾಖೆ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ರೈಲ್ವೆ ಇಲಾಖೆ ಹಾಗೂ ಸ್ಥಳೀಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು.
1995- 96ನೇ ಸಾಲಿನಲ್ಲಿ ಇಲ್ಲಿ ಹೊಸ ರೈಲ್ವೆ ಮಾರ್ಗಗಳಿಗೆ ಯೋಜನೆ ರೂಪಿಸಲಾಗಿತ್ತು, 30 ವರ್ಷ ಕಳೆದಿದ್ದು ಕೆಲ ಯೋಜನೆಗಳು ಪೂರ್ಣಗೊಂಡಿದೆ, ಇನ್ನು ಕೆಲ ಯೋಜನೆಗಳು ಭೂಸ್ವಾಧೀನ ಹಾಗೂ ಇನ್ನಿತರ ಕಾರಣಗಳಿಂದ ವಿಳಂಬವಾಗಿದ್ದು ಇನ್ನೆರಡು ಮೂರು ವರ್ಷದಲ್ಲಿ ಎಲ್ಲಾ ಮಾರ್ಗದ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸುತ್ತೇವೆ ಎಂದು ಭರವಸೆ ನೀಡಿದರು.
ಬೇಲೂರು- ಆಲೂರು ಮಾರ್ಗದ ರೈಲ್ವೆ ಯೋಜನೆಗೆ 498 ಎಕರೆ ಭೂಸ್ವಾಧೀನ ಕಾರ್ಯ ಪೂರ್ಣಗೊಂಡಿದ್ದು ಇನ್ನೆರಡು ಮೂರು ತಿಂಗಳಲ್ಲಿ ರೈಲ್ವೆ ಇಲಾಖೆಗೆ ಹಸ್ತಾಂತರ ವಾಗಲಿದೆ ನಂತರ ಕಾಮಗಾರಿ ತ್ವರಿತವಾಗಿ ನಡೆಯಲಿದೆ ಎಂದು ಹೇಳಿದರು.
ರಾಯದುರ್ಗ-ತುಮಕೂರು -ಚಿತ್ರದುರ್ಗ ಮಾರ್ಗದ ಯೋಜನೆಗಳಿಗೆ ೧ ಸಾವಿರ ಕೋಟಿ ರೂ ಬಿಡುಗಡೆಯಾಗಿತ್ತು,ಅಲ್ಲದೆ 400 ಕೋಟಿ ಹಣದಲ್ಲಿ ವಿದ್ಯುದೀಕರಣ ಮಾರ್ಗಕ್ಕೆ ವ್ಯಯ ಮಾಡಲಾಗಿದೆ.
ಸಕಲೇಶಪುರ ಮಾರ್ಗವಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುವ ರೈಲು ಮಾರ್ಗ ಪ್ರಯಾಣಕ್ಕೆ 3 ಗಂಟೆ ಕಾಲ ಹಿಡಿಯುತ್ತಿದ್ದು ಹೊಸ ರೈಲು ಮಾರ್ಗಕ್ಕೆ ಸರ್ವೇ ಮಾಡಲು ಅನುಭವಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಅವರು ವರದಿ ಕೊಟ್ಟ ಬಳಿಕ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸೋಮಣ್ಣ ತಿಳಿಸಿದರು.
ಹಾಸನ ಮಾಜಿ ಪ್ರಧಾನಿ ಎಚ್. ಡಿ ದೇವೇಗೌಡರ ತವರು,ಕೇಂದ್ರ ಸ್ಥಾನದಲ್ಲಿ ದೊಡ್ಡ ಪ್ರಮಾಣದ ರೈಲ್ವೆ ಸ್ಟೇಷನ್ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಅಮೃತ್ ಯೋಜನೆ ಅಡಿ ಹಣ ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಜಿಲ್ಲೆಗೆ 11,000 ಕೋಟಿ ರೈಲ್ವೆ ಯೋಜನೆಗೆ ವ್ಯಯ ಮಾಡಬೇಕಾಗಿದ್ದು ಇದರಲ್ಲಿ 5500 ಕೋಟಿ ರಾಜ್ಯ ಸರ್ಕಾರ ಪಾಲು ನೀಡಬೇಕು ಆದರೆ ಇದುವರೆಗೆ 500 ರೂಗಳನ್ನೂ ನೀಡಿಲ್ಲ ಆದ್ದರಿಂದ ಪ್ರಧಾನ ಮಂತ್ರಿ ಮೋದಿಯವರೊಂದಿಗೆ ಹಾಗೂ ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡಿ ಪೂರ್ಣ ಪ್ರಮಾಣದ ಹಣವನ್ನು ಕೇಂದ್ರದಿಂದಲೇ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಮಂಗಳೂರಿನಿಂದ -ಬೆಂಗಳೂರಿಗೆ ಪೀಕ್ ಅವರ್ನಲ್ಲಿ ಸಂಚಾರ ಮಾಡಲು ಹೊಸದಾಗಿ ರೈಲನ್ನು ಓಡಿಸಲು ಒಪ್ಪಿಗೆ ಸಿಕ್ಕಿದೆ ಆದಷ್ಟು ಶೀಘ್ರವಾಗಿ ಈ ರೈಲು ಸಂಚಾರ ಮಾಡಲಿದೆ ಎಂದು ಹೇಳಿದರು.
ಹಾಸನ ನಗರದ ರೈಲ್ವೆ ಮೇಲ್ ಸೇತುವೆ ಕಾಮಗಾರಿಯನ್ನು ಎರಡು ಮೂರು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು,ಇದಕ್ಕೆ ಪೂರ್ಣ ಪ್ರಮಾಣದ ಹಣವನ್ನು ಕೇಂದ್ರ ಸರ್ಕಾರದಿಂದಲೇ ಭರಿಸಲಾಗುತ್ತಿದೆ ಎಂದು ಸೋಮಣ್ಣ ಸ್ಪಷ್ಟಪಡಿಸಿದರು.
ಸಭೆಯಲ್ಲಿ ಸಂಸದ ಶ್ರೇಯಸ್ ಪಟೇಲ್ ಅವರು ಹೊಳೆನರಸೀಪುರ ರೈಲು ನಿಲ್ದಾಣ ಮೇಲ್ದರ್ಜೆಗೇರಿಸುವ ಸಂಬಂಧ ಪ್ರಸ್ತಾವನೆಯನ್ನು ಸೋಮಣ್ಣ ಅವರ ಗಮನಕ್ಕೆ ತಂದರು.
ಈ ವೇಳೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಸೋಮಣ್ಣ,
ಹೊಳೆ ನರಸೀಪುರದಲ್ಲಿ ರೈಲ್ವೆ ಯೋಜನೆ ಅಭಿವೃದ್ಧಿಗೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು, ಎಚ್ ಡಿ ಕುಮಾರಸ್ವಾಮಿ ಎಚ್. ಡಿ ರೇವಣ್ಣ, ದಿವಂಗತ ಪುಟ್ಟಸ್ವಾಮಿಗೌಡ ಅವರು ಸತತ ಪ್ರಯತ್ನ ನಡೆಸಿದ್ದಾರೆ ನೀನು ಸಹ ಅದರ ಹಿಂದೆ ಹೋಗಬೇಡ ಜಿಲ್ಲೆಯಲ್ಲಿ ಎಂಟು ತಾಲೂಕುಗಳಿದ್ದು ಆ ಕಡೆಯೂ ಗಮನ ಹರಿಸು ಎಂದು ಸಂಸದ ಶ್ರೇಯಸ್ ಪಟೇಲ್ ಗೆ ಸೋಮಣ್ಣ ಸಲಹೆ ನೀಡಿದರು.
ಈ ವೇಳೆ ಶಾಸಕ ಹುಲ್ಲಹಳ್ಳಿ ಸುರೇಶ್ ,ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಟಿ ಶಾಂತಲಾ,ಎಸಿ ಮಾರುತಿ, ಬೇಲೂರು ತಹಶೀಲ್ದಾರ್ ಮಮತಾ, ಹಾಸನ ತಹಸಿಲ್ದಾರ್ ಶ್ವೇತಾ, ವಿಶೇಷ ಭೂಸ್ವಾಧೀನಾಧಿಕಾರಿ ನಾಗರಾಜ್, ರೈಲ್ವೆ ಇಲಾಖೆ ಹಿರಿಯ ಅಧಿಕಾರಿ ರಾಮಗೋಪಾಲ್ ಮತ್ತಿತರರು ಹಾಜರಿದ್ದರು.