Thu. Mar 5th, 2026

ಹೋಳಿ ಸಂಭ್ರಮಕ್ಕೆ ರೈಲ್ವೆ ‘ಸ್ಪೆಷಲ್’ ಗಿಫ್ಟ್: 56 ವಿಶೇಷ ರೈಲು, 800ಕ್ಕೂ ಹೆಚ್ಚು ಟ್ರಿಪ್!

Share this with Friends

ಹುಬ್ಬಳ್ಳಿ: ಬಣ್ಣಗಳ ಹಬ್ಬ ‘ಹೋಳಿ’ಗೆ ಊರಿಗೆ ತೆರಳುವ ಜನಸಾಮಾನ್ಯರಿಗೆ ನೈಋತ್ಯ ರೈಲ್ವೆ ಸಿಹಿ ಸುದ್ದಿ ನೀಡಿದೆ. ಹಬ್ಬದ ಸಂದರ್ಭದಲ್ಲಿ ಉಂಟಾಗುವ ವಿಪರೀತ ರದ್ದಿಯನ್ನು ತಪ್ಪಿಸಲು ಮತ್ತು ಪ್ರಯಾಣಿಕರ ಪ್ರಯಾಣ ಸುಗಮಗೊಳಿಸಲು ಬರೋಬ್ಬರಿ 56 ವಿಶೇಷ ರೈಲುಗಳನ್ನು ಓಡಿಸಲು ರೈಲ್ವೆ ಮಂಡಳಿ ಮುಂದಾಗಿದೆ.

ಮಾರ್ಚ್ ತಿಂಗಳ ಪೂರ್ತಿ ಅಂದರೆ ಮಾರ್ಚ್ 1ರಿಂದ 31ರವರೆಗೆ ಈ ವಿಶೇಷ ರೈಲುಗಳು ಒಟ್ಟು 856 ಟ್ರಿಪ್‌ಗಳನ್ನು ನಡೆಸಲಿದ್ದು, ದೂರದ ಊರುಗಳಿಗೆ ತೆರಳುವವರಿಗೆ ಟಿಕೆಟ್ ಸಿಗುವ ಆತಂಕ ದೂರವಾದಂತಾಗಿದೆ.

ಎಲ್ಲೆಲ್ಲಿಗೆ ಈ ಸೇವೆ?

ನೈಋತ್ಯ ರೈಲ್ವೆ ವ್ಯಾಪ್ತಿಯಿಂದ ದೇಶದ ವಿವಿಧ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವುದು ಈ ವಿಶೇಷ ರೈಲುಗಳ ಉದ್ದೇಶ.

ಅಂತರರಾಜ್ಯ ಸಂಪರ್ಕ: ದೆಹಲಿಯ ಹಜರತ್ ನಿಜಾಮುದ್ದೀನ್, ಜೋಧ್‌ಪುರ, ಮದಾರ್ ಜಂಕ್ಷನ್, ಬಿಹಾರದ ಮುಜಾಫರ್‌ಪುರ, ಕೇರಳದ ಕೊಲ್ಲಂ ಹಾಗೂ ತಿರುವನಂತಪುರಂ ಸೇರಿದಂತೆ ಪ್ರಮುಖ ನಗರಗಳಿಗೆ ರೈಲುಗಳು ಲಭ್ಯವಿವೆ.

ರಾಜ್ಯದ ಒಳಗಿನವರಿಗೆ ಅನುಕೂಲ: ಕಲಬುರಗಿ ಮತ್ತು ಬೀದರ್ ಭಾಗದ ಜನರಿಗೆ ವಿಶೇಷ ಆದ್ಯತೆ ನೀಡಲಾಗಿದೆ.

ವಲಯದೊಳಗಿನ ‘ದಟ್ಟಣೆ’ಗೆ ಬ್ರೇಕ್

ಬೆಂಗಳೂರು ಮತ್ತು ಉತ್ತರ ಕರ್ನಾಟಕದ ನಡುವೆ ಸಂಚರಿಸುವ ಜನರಿಗಾಗಿ ನೈಋತ್ಯ ರೈಲ್ವೆಯು 726 ಟ್ರಿಪ್‌ಗಳನ್ನು ಮೀಸಲಿಟ್ಟಿದೆ.

ಬೆಂಗಳೂರು ಕೇಂದ್ರಿತ: ಯಶವಂತಪುರ-ಹಿಂದೂಪುರ, ಬೆಂಗಳೂರು-ಅಶೋಕಪುರಂ, ಬೆಂಗಳೂರು-ಹಾಸನ ಮತ್ತು ಚಿಕ್ಕಬಳ್ಳಾಪುರ ಮಾರ್ಗಗಳಲ್ಲಿ ಸಂಚಾರ ಹೆಚ್ಚಳವಾಗಿದೆ.

ಉತ್ತರ ಕರ್ನಾಟಕ: ಹುಬ್ಬಳ್ಳಿ-ವಿಜಯಪುರ, ಹೊಸಪೇಟೆ-ಹುಬ್ಬಳ್ಳಿ ಹಾಗೂ ಬಳ್ಳಾರಿ-ದಾವಣಗೆರೆ ನಡುವಿನ ಸಂಚಾರವು ಪ್ರಯಾಣಿಕರ ಒತ್ತಡವನ್ನು ಕಡಿಮೆ ಮಾಡಲಿದೆ.

ಹೆಚ್ಚುವರಿ ಬೋಗಿಗಳ ವ್ಯವಸ್ಥೆ

ಕೇವಲ ಹೊಸ ರೈಲುಗಳಲ್ಲದೆ, ಈಗ ಚಾಲನೆಯಲ್ಲಿರುವ ನಿಯಮಿತ ರೈಲುಗಳಿಗೂ ಹೆಚ್ಚುವರಿ ಬೋಗಿ (Augmentation) ಗಳನ್ನು ಅಳವಡಿಸಲು ತೀರ್ಮಾನಿಸಲಾಗಿದೆ. ಇದರಿಂದಾಗಿ ವೇಟಿಂಗ್ ಲಿಸ್ಟ್‌ನಲ್ಲಿರುವ ಪ್ರಯಾಣಿಕರಿಗೆ ಕನ್ಫರ್ಮ್ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದೆ.

“ಹಬ್ಬದ ಸಮಯದಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ಸಮಯಪಾಲನೆಗೆ ನಮ್ಮ ಮೊದಲ ಆದ್ಯತೆ. ದಟ್ಟಣೆ ಹೆಚ್ಚಿರುವ ಮಾರ್ಗಗಳನ್ನು ಗುರುತಿಸಿ ಈ 56 ರೈಲುಗಳ ವ್ಯವಸ್ಥೆ ಮಾಡಲಾಗಿದೆ.”ಎಂದು ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಂಜುನಾಥ ಕನಮಡಿ ತಿಳಿಸಿದ್ದಾರೆ.

 


Share this with Friends

Related Post