ಬೆಂಗಳೂರು: ನಿಮಗೆ ಅಧಿಕಾರ ಬೇಕು, ನಿಮ್ಮ ಹಿಂದೆ ಮುಂದೆ ಬೆಂಗಾವಲು, ಪೈಲಟ್ ಬೇಕಲ್ಲವೇ? ಜವಾಬ್ದಾರಿ ನಿರ್ವಹಣೆ ಬೇಡ ಅದಿಷ್ಟೇ ಸಾಕು ಎಂದರೆ ಖಾತೆಯೇ ಇಲ್ಲದ ಸಚಿವರಾಗಿ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಗೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ವ್ಯಂಗ್ಯವಾಡಿದ್ದಾರೆ.
ನಗರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು,ಡಾ. ಪರಮೇಶ್ವರ್ ಅವರು ಪೊಲೀಸ್ ಇಲಾಖೆಯನ್ನು ಈ ಮಟ್ಟಕ್ಕೆ ತರಬಾರದು ಎಂದು ಕೈಮುಗಿದು ವಿನಂತಿಸಿದರು. ದಯವಿಟ್ಟು ನಿಮ್ಮಿಂದ ಸಾಧ್ಯವಾದರೆ ಇಲಾಖೆಯನ್ನು ನಿರ್ವಹಣೆ ಮಾಡಿ; ಇಲ್ಲವಾದರೆ ರಾಜೀನಾಮೆ ಕೊಡಿ; ನಿಮಗೆ ಸಚಿವರಾಗಿ ಇರಬೇಕಲ್ಲವೇ? ಹಿಂದೆ ಮುಂದೆ ಬೆಂಗಾವಲು, ಪೈಲಟ್ ಬೇಕಲ್ಲವೇ? ಖಾತೆಯೇ ಇಲ್ಲದ ಸಚಿವರಾಗಿ ಎಂದು ಕುಹಕವಾಡಿದರು.
ಕಾಂಗ್ರೆಸ್ ಪಕ್ಷ ದೂಳೀಪಟ:
ತುಷ್ಟೀಕರಣ, ವಂಶವಾದ, ಭ್ರಷ್ಟಾಚಾರದಿಂದ ಹೊರಕ್ಕೆ ಬರಲು ಕಾಂಗ್ರೆಸ್ಸಿಗೆ ಸಾಧ್ಯವಾಗಿಲ್ಲ; ಇದರಿಂದ ಆ ಪಕ್ಷ ದೂಳೀಪಟವಾಗುತ್ತಿದೆ. ಕಾಂಗ್ರೆಸ್ಸಿನ ಭ್ರಷ್ಟಾಚಾರದ ಮೂಲ ನರೇಗಾ ಆಗಿತ್ತು. ಮಹಾತ್ಮ ಗಾಂಧೀಜಿ ಅವರ ಹೆಸರನ್ನು ಉದ್ಯೋಗ ಖಾತರಿಗೆ ಜೋಡಿಸಿ, ಅವರ ಹೆಸರಿನಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಮಾಡಿದ್ದು ಕಾಂಗ್ರೆಸ್ ಪಕ್ಷ ಎಂದು ಆರೋಪಿಸಿದರು.
ಬಿಜೆಪಿಯಲ್ಲಿ ಮಾತ್ರ ಸಾಧ್ಯ:
ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬೀಳುವ ಸಂಸ್ಕೃತಿ ಬಿಜೆಪಿಯಲ್ಲಿ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಬೂತ್ ಮಟ್ಟದಿಂದ ಸಂಘಟನೆಯ ಮೂಲಕ ರಾಷ್ಟ್ರೀಯ ಅಧ್ಯಕ್ಷರಾಗುವ ಹಂತದವರೆಗೆ ಬೆಳೆಯುವುದು ಕೇವಲ ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎಂದು ರಾಜೀವ್ ತಿಳಿಸಿದರು.
ಕಾಂಗ್ರೆಸ್ ಪಕ್ಷವು ವಂಶ, ಕುಟುಂಬ ರಾಜಕಾರಣಕ್ಕೆ ಯಾವ ರೀತಿ ಜೋತು ಬಿದ್ದಿದೆ? ಕಾಂಗ್ರೆಸ್ ಪಕ್ಷಕ್ಕೆ ಖರ್ಗೆಯವರು ರಾಷ್ಟ್ರೀಯ ಅಧ್ಯಕ್ಷರಾಗಿರಬಹುದು; ಆದರೆ ನಮ್ಮ ನಾಯಕರು ಯಾರೆಂದರೆ ರಾಹುಲ್ ಗಾಂಧಿ ಮತ್ತು ಗಾಂಧಿ ಕುಟುಂಬ ಎಂದು ಕಾಂಗ್ರೆಸ್ ಮುಖಂಡರೇ ಹೇಳುತ್ತಾರೆ. 14 ಕೋಟಿ ಸಕ್ರಿಯ ಕಾರ್ಯಕರ್ತರಿರುವ, 15ಕ್ಕೂ ಹೆಚ್ಚು ರಾಜ್ಯಗಳಲ್ಲಿ ಮುಖ್ಯಮಂತ್ರಿಗಳಿರುವ ಜಗತ್ತಿನ ಅತಿ ದೊಡ್ಡ ರಾಷ್ಟ್ರೀಯ ಪಕ್ಷವಾದ ಬಿಜೆಪಿಯ ನೂತನ ರಾಷ್ಟ್ರಾಧ್ಯಕ್ಷರಾಗಿ ನಿತಿನ್ ನಬಿನ್ ಅವರು ಪಕ್ಷದ ಆಂತರಿಕ ಪ್ರಜಾಪ್ರಭುತ್ವದ ಅಡಿಯಲ್ಲಿ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ನಿತಿನ್ ನಬಿನ್ ಅವರಿಗೆ ರಾಜ್ಯ ಬಿಜೆಪಿ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತದೆ ಎಂದು ತಿಳಿಸಿದರು.
ಕೇವಲ 45 ವರ್ಷದ ನಿತಿನ್ ನಬಿನ್ ಅವರನ್ನು ಪಕ್ಷ ರಾಷ್ಟ್ರ ಅಧ್ಯಕ್ಷರಾಗಿ ಆಯ್ಕೆ ಮಾಡಿದೆ. ಜಗತ್ತಿನ ಬೇರೆ ರಾಷ್ಟ್ರಗಳಿಗೆ ಇದು ಮಾದರಿ. ಇದು ಕರ್ನಾಟಕದ ಕೋಟ್ಯಂತರ ಕಾರ್ಯಕರ್ತರಿಗೆ ಪ್ರೇರಣೆಯಾಗಿದೆ ಎಂದು ತಿಳಿಸಿದರು.

