ರಾಮನಗರ,ಜು.13: ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾಯಿಸುವ ಪ್ರಸ್ತಾವನೆಯನ್ನು ಪರಿಗಣಿಸದಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಸಂಸದ ಡಾ.ಸಿ.ಎನ್.ಮಂಜುನಾಥ್ ಪತ್ರ ಬರೆದಿದ್ದಾರೆ.
ಈ ರೀತಿ ಹೆಸರು ಬದಲಾಯಿಸುವುದು ಸರಿಯಲ್ಲ ಎಂದು ಡಾ.ಮಂಜುನಾಥ್ ಪತ್ರದಲ್ಲಿ ತಿಳಿಸಿದ್ದಾರೆ.
ಹೆಸರಿನೊಂದಿಗೆ ಭಾವನಾತ್ಮಕ, ಧಾರ್ಮಿಕ, ಐತಿಹಾಸಿಕ ಮತ್ತು ಪೌರಾಣಿಕ ಸಂಪರ್ಕವಿದೆ. ಮಾಜಿ ಸಿಎಂ ಕೆಂಗಲ್ ಹನುಮಂತಯ್ಯ ಅವರು ಜಿಲ್ಲೆಯ ಹೆಸರನ್ನು ಕ್ಲೋಸ್ ಪೇಟೆಯಿಂದ ರಾಮನಗರ ಎಂದು ಬದಲಾಯಿಸಿದ್ದಾರೆ.
ಜಿಲ್ಲೆಯಲ್ಲಿ ಸಿದ್ದಗಂಗಾ ಮಠದ ಶಿವಕುಮಾರ ಮಹಾಸ್ವಾಮೀಜಿ ಹಾಗೂ ಆದಿಚುಂಚುನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಹುಟ್ಟಿದ್ದು, ನಾಡಪ್ರಭು ಕೆಂಪೇಗೌಡ ಕೂಡ ಈ ಭಾಗದವರೇ ಆಗಿದ್ದಾರೆ.
ರಾಮನಗರ ಐದು ಮಂದಿ ಸಿಎಂಗಳನ್ನು ನೀಡಿದೆ, ಜೆಡಿಎಸ್ ನಾಯಕ ಎಚ್.ಡಿ ದೇವೇಗೌಡರು ಈ ಕ್ಷೇತ್ರದಿಂದ ಸಂಸದರಾಗಿ ಗೆದ್ದು ಪ್ರಧಾನಿಯಾದರು, ಇದು ಕಣ್ವ ಮಹರ್ಷಿಯ ಸ್ಥಳ ಮತ್ತು ರಾಮಗಿರಿ ಬೆಟ್ಟದಲ್ಲಿ ರಾಮನು ತಂಗಿದ್ದ ಎಂಬ ಪ್ರತೀತಿ ಇದೆ ಎಂದು ಪತ್ರದಲ್ಲಿ ಮಂಜುನಾಥ್ ಹೇಳಿದ್ದಾರೆ.