ಬೆಂಗಳೂರು,ಏ.13: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಇಬ್ಬರು ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಆರೋಪಿಗಳನ್ನು ಕೋರ್ಟ್ ಎನ್‍ಐಎ ಕಸ್ಟಡಿಗೆ ನೀಡಿದೆ.
ಆರೋಪಿಗಳನ್ನು ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದ್ದರಿಂದ ನ್ಯಾಯಾಧೀಶರ ಮನೆಗೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
ಎನ್‍ಐಎ ಪರವಾಗಿ ಎಸ್‍ಪಿ ಪ್ರಸನ್ನಕುಮಾರ್ ಹಾಜರಾಗಿದ್ದು, ವಾದ ಮಂಡಿಸಿದರು. ಈ ವೇಳೆ ಎನ್‍ಐಎ ಎಸ್ಪಿ ಶಿವವಿಕ್ರಮ್ ಕೂಡ ಹಾಜರಿದ್ದರು.
ಶಂಕಿತರಾದ ಅಬ್ದುಲ್ ಮತೀನ್ ತಾಹ, ಮುಸಾವಿರ್ ಹುಸೇನ್‍ನನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಿ ಕೋಲ್ಕತ್ತಾದಿಂದ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಎನ್‍ಐಎ ಪೊಲೀಸರು ಕರೆತಂದಿದ್ದರು. ಇಬ್ಬರನ್ನೂ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ
ಬಾಂಬ್ ಬ್ಲಾಸ್ಟ್ ಕೇಸಲ್ಲಿ ಬಂಧಿತರಾಗಿರುವ ಮುಜಾಮಿಲ್ ಶರೀಫ್, ಮಾಜ್ ಮಾನಿರ್ ಹೇಳಿಕೆ ಅಧರಿಸಿ ವಿಚಾರಣೆ ನಡೆಸಲಾಗುವುದು.
ರಾಮೇಶ್ವರಂ ಬಾಂಬ್ ಸ್ಫೋಟ ಕೇಸಲ್ಲಿ ಯಾರ ಪಾತ್ರ ಏನು ಈ ಕೃತ್ಯದ ಹಿಂದೆ ಬೇರೆ ಯಾರೆಲ್ಲಾ ಇದ್ದಾರೆ,ರಾಮೇಶ್ವರಂ ಕೆಫೆಯಲ್ಲೇ ಬಾಂಬ್ ಬ್ಲಾಸ್ಟ್ ಮಾಡಿದ ಉದ್ದೇಶವೇನು ಮತ್ತೆಲ್ಲಿ ವಿಧ್ವಂಸಕ ಕೃತ್ಯವೆಸಗಲು ಪ್ಲಾನ್ ಮಾಡಲಾಗಿತ್ತು ಎಂಬಿತ್ಯಾದಿ ಬಗ್ಗೆ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.