ಬೆಂಗಳೂರು: ಸ್ಯಾಂಡಲ್ವುಡ್ನ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿರುವ ಒಂದು ಪೋಸ್ಟ್ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿದೆ. ನಾಳೆ ಬೆಳಗ್ಗೆ 10 ಗಂಟೆಗೆ ಒಂದು ವಿಶೇಷ ಲಿಂಕ್ ಹಂಚಿಕೊಳ್ಳುವುದಾಗಿ ತಿಳಿಸಿರುವ ಅವರು, ಅಭಿಮಾನಿಗಳಿಗೆ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದ್ದಾರೆ.
ಉಪ್ಪಿ ಪೋಸ್ಟ್ನಲ್ಲಿ ಏನಿದೆ?
“ನಾಳೆ ಬೆಳಗ್ಗೆ 10 ಗಂಟೆಗೆ ಒಂದು ಲಿಂಕ್ ಪೋಸ್ಟ್ ಮಾಡ್ತೀನಿ. ಇದನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬೇಡಿ ಎಂದು ನನಗೆ ಸೂಚನೆ ಇದೆ. ಹಾಗಾಗಿ ಪೋಸ್ಟ್ ಮಾಡಿದ ಸ್ವಲ್ಪ ಹೊತ್ತಿನಲ್ಲೇ ಡಿಲೀಟ್ ಮಾಡಿದರೂ ಮಾಡಬಹುದು. ನೀವು ಇದನ್ನು ನೋಡಿದರೆ ಬೇರೆ ಯಾರ ಹತ್ತಿರವೂ ಹೇಳಬೇಡಿ. ಸದ್ಯಕ್ಕೆ ಇದು ನಮ್ಮ ನಡುವೆ ಮಾತ್ರ ಇರಲಿ. ಲಿಂಕ್ ನೋಡಿ ಸುಮ್ಮನಿದ್ದುಬಿಡಿ,” ಎಂದು ಉಪೇಂದ್ರ ಬರೆದುಕೊಂಡಿದ್ದಾರೆ.
ಸಿನಿಮಾ ಪ್ರಚಾರವೋ ಅಥವಾ ಹೊಸ ವಿಚಾರವೋ?
ಯಾವಾಗಲೂ ವಿಭಿನ್ನ ಆಲೋಚನೆಗಳ ಮೂಲಕ ಸದ್ದು ಮಾಡುವ ಉಪೇಂದ್ರ, ಈ ಬಾರಿ ಯಾವುದೋ ದೊಡ್ಡ ವಿಷ್ಯವನ್ನೇ ಸಿದ್ಧಪಡಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದು ಅವರ ಬಹುನಿರೀಕ್ಷಿತ ‘UI’ (ಯುವಿ) ಸಿನಿಮಾದ ಟ್ರೈಲರ್ ಅಥವಾ ಹಾಡಿನ ಲಿಂಕ್ ಇರಬಹುದು ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. ಸದಾ ಸಸ್ಪೆನ್ಸ್ ಇಟ್ಟು ಸಿನಿಮಾ ಪ್ರಚಾರ ಮಾಡುವ ಉಪ್ಪಿ, ಈ ಬಾರಿಯೂ ಅದೇ ಹಾದಿ ಹಿಡಿದಿದ್ದಾರಾ ಎಂಬ ಪ್ರಶ್ನೆ ಮೂಡಿದೆ.
ಇನ್ನು ಕೆಲವರು ಇದು ಅವರ ‘ಪ್ರಜಾಕೀಯ’ ಪಕ್ಷಕ್ಕೆ ಸಂಬಂಧಿಸಿದ ಮಹತ್ವದ ಘೋಷಣೆಯೂ ಇರಬಹುದು ಎಂದು ಚರ್ಚಿಸುತ್ತಿದ್ದಾರೆ. ಒಟ್ಟಿನಲ್ಲಿ ಆ ರಹಸ್ಯ ಲಿಂಕ್ ಏನೆಂಬುದು ತಿಳಿಯಲು ನಾಳೆ ಬೆಳಗ್ಗೆ 10 ಗಂಟೆಯವರೆಗೆ ಕಾಯಲೇಬೇಕಿದೆ.


