Fri. Mar 6th, 2026

ಶಾಲಾ ಬಾಲಕಿಯರಿಗೆ ಉಚಿತ ಸೈಕಲ್ ಯೋಜನೆ ಮರುಜಾರಿಗೆ ಶಿಫಾರಸು: ಸಿಎಂ ಸಿದ್ದರಾಮಯ್ಯಗೆ ಆಯೋಗದ ವರದಿ ಸಲ್ಲಿಕೆ

Share this with Friends

ಬೆಂಗಳೂರು: ರಾಜ್ಯದಲ್ಲಿ ಶಾಲಾ ಬಾಲಕಿಯರಿಗೆ ಉಚಿತ ಬೈಸಿಕಲ್ ಯೋಜನೆಯನ್ನು ಮರುಜಾರಿಗೊಳಿಸುವುದು ಸೇರಿದಂತೆ ಪ್ರಮುಖ ಅಭಿವೃದ್ಧಿ ಕ್ರಮಗಳ ಕುರಿತು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗವು ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಗುರುವಾರ ನಗರದ ಮುಖ್ಯಮಂತ್ರಿಗಳ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಆಯೋಗದ ಉಪಾಧ್ಯಕ್ಷರಾದ ಬಿ.ಆರ್. ಪಾಟೀಲ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಮಹತ್ವದ ವರದಿಯನ್ನು ಹಸ್ತಾಂತರಿಸಿದರು. ಸುಮಾರು 210 ಪುಟಗಳ ಈ ಸಮಗ್ರ ವರದಿಯಲ್ಲಿ ಶಿಕ್ಷಣ, ಕೃಷಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಸುಧಾರಣೆಗಳನ್ನು ಪ್ರಸ್ತಾಪಿಸಲಾಗಿದೆ.

ವರದಿಯ ಮುಖ್ಯಾಂಶಗಳು:

ಉಚಿತ ಬೈಸಿಕಲ್: ಸಾರಿಗೆ ಸಂಪರ್ಕದ ಕೊರತೆ ಇರುವ ಕಡೆಗಳಲ್ಲಿ ಬಾಲಕಿಯರ ಶಿಕ್ಷಣಕ್ಕೆ ಅನುಕೂಲವಾಗುವಂತೆ ಉಚಿತ ಬೈಸಿಕಲ್ ಯೋಜನೆಯನ್ನು ಪುನರಾರಂಭಿಸಲು ಸೂಚಿಸಲಾಗಿದೆ.

ಶಿಕ್ಷಣ ಸುಧಾರಣೆ: ಅತಿಥಿ ಶಿಕ್ಷಕರ ನೇಮಕಾತಿ ಪದ್ಧತಿಯನ್ನು ನಿಲ್ಲಿಸಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಕಾಯಂ ಆಗಿ ಭರ್ತಿ ಮಾಡಲು ಶಿಫಾರಸು ಮಾಡಲಾಗಿದೆ.

ಶಿಕ್ಷಣ ಹಕ್ಕು ಕಾಯ್ದೆ ವಿಸ್ತರಣೆ: ಪ್ರಸ್ತುತ 6 ರಿಂದ 14 ವರ್ಷವಿರುವ ಉಚಿತ ಶಿಕ್ಷಣದ ವ್ಯಾಪ್ತಿಯನ್ನು 4 ರಿಂದ 16 ವರ್ಷಕ್ಕೆ ವಿಸ್ತರಿಸುವಂತೆ ಆಯೋಗ ಕೋರಿದೆ.

ಬಜೆಟ್‌ನಲ್ಲಿ ಆದ್ಯತೆ: ಆಯೋಗವು ನೀಡಿರುವ ಈ ಪ್ರಸ್ತಾವನೆಗಳನ್ನು ಮುಂಬರುವ 2026-27ರ ರಾಜ್ಯ ಬಜೆಟ್‌ನಲ್ಲಿ ಅಳವಡಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ.

ಈ ಸಂದರ್ಭದಲ್ಲಿ ಯೋಜನೆ ಹಾಗೂ ಸಾಂಖ್ಯಿಕ ಖಾತೆ ಸಚಿವ ಡಿ. ಸುಧಾಕರ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್‌, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್‌ ಹಾಗೂ ಆಯೋಗದ ಇತರ ಗಣ್ಯ ಸದಸ್ಯರು ಉಪಸ್ಥಿತರಿದ್ದರು.


Share this with Friends

Related Post