ಕೋಲಾರ:ಹೈಕೋರ್ಟ್ ಸೂಚನೆಯಂತೆ ನಾಳೆ ಕೋಲಾರ ಜಿಲ್ಲೆ ಮಾಲೂರು ವಿಧಾನಸಭಾ ಕ್ಷೇತ್ರದ ಮತಗಳ ಮರು ಎಣಿಕೆ ನಡೆಯಲಿದ್ದು,ನಿಷ್ಪಕ್ಷಪಾತ ಮತ್ತು ನ್ಯಾಯಯುತವಾಗಿ ಎಲ್ಲವನ್ನೂ ಎಣಿಕೆ ಮಾಡುವುದಾಗಿ ಜಿಲ್ಲಾಧಿಕಾರಿಗಳೂ ಒಪ್ಪಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.
ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆಯ ಕುರಿತು ಇಂದು ಕೋಲಾರದ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ಬಿಜೆಪಿ ನಿಯೋಗ ಸಾರ್ವತ್ರಿಕ ಚುನಾವಣಾ ಮತ ಎಣಿಕೆ ವೇಳೆ ನಡೆದಂತ ವಿದ್ಯಮಾನಗಳು ಜರುಗದಂತೆ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಬಹಳ ಕಡಿಮೆ ಅಂತರದಲ್ಲಿ ಅಭ್ಯರ್ಥಿ ಸೋಲು- ಗೆಲುವು ಆಗಿದೆ. ಆ ಸಂದರ್ಭದಲ್ಲಿ ಕೆಲವರ ಮಧ್ಯಪ್ರವೇಶದ ಕಾರಣದಿಂದ ನಮ್ಮ ಅಭ್ಯರ್ಥಿ ಸೋತಿದ್ದು, ಮರು ಎಣಿಕೆ ಮಾಡಿರಲಿಲ್ಲ.ಕೊನೆ ಕ್ಷಣದಲ್ಲಿ ನಮ್ಮ ಏಜೆಂಟರನ್ನು ಒತ್ತಾಯದಿಂದ ಹೊರದಬ್ಬಿದ್ದರು. ಈ ಎಲ್ಲ ಕಾರಣದಿಂದ ನಮಗೂ ಅನುಮಾನ ಇತ್ತು. ಅದರಿಂದ ಕೋರ್ಟಿಗೆ ಹೋಗಿದ್ದು, ಆದೇಶ ಬಂದಿದೆ. ಬಳಿಕ ಸುಪ್ರೀಂ ಕೋರ್ಟಿಗೂ ಹೋಗಿದೆ ಎಂದು ವಿವರ ನೀಡಿದರು.
ಯಾವುದೇ ಎಣಿಕೆ ನಡೆಯುವಾಗ ಕ್ಯಾಮೆರಾ ಕಣ್ಗಾವಲಿನಲ್ಲಿ ನಡೆಯುತ್ತದೆ. ಇಡೀ ರಾಜ್ಯದ ಇತರ ಕ್ಷೇತ್ರಗಳ ಕ್ಯಾಮೆರಾ ದಾಖಲಾತಿ ಇದೆ. ಆದರೆ, ಮಾಲೂರಿನದು ಯಾಕೆ ಇಲ್ಲ?ಮತಗಳು ಹೊಂದಾಣಿಕೆ ಆಗುತ್ತಿಲ್ಲ ಎಂಬ ಆಕ್ಷೇಪವಿದೆ. ಇದು ಕೂಡ ಅನುಮಾನಕ್ಕೆ ಕಾರಣ ಎಂದರು.
ಇಡೀ ದೇಶದಲ್ಲಿ ಏನಾಗುತ್ತಿದೆ? ಕಾಂಗ್ರೆಸ್ ಏನು ಮಾಡುತ್ತಿದೆ? ಅದೆಲ್ಲ ನಮಗೂ ಗೊತ್ತಿದೆ. ಇದು ಕ್ಯಾಮೆರಾ ಕಣ್ಗಾವಲಿನಲ್ಲಿ ನಡೆಯಬೇಕೆಂದು ತಿಳಿಸಿದ್ದೇವೆ; ಒತ್ತಡ ಹಾಕುವವರನ್ನು ದೂರ ಇಡಲು ಕೋರಿರುವುದಾಗಿ ತಿಳಿಸಿದರು.
1952ರಲ್ಲಿ ಬಾಬಾಸಾಹೇಬ ಡಾ. ಅಂಬೇಡ್ಕರ್ ಅವರು ಸೋತಿದ್ದರಲ್ಲವೇ? ಆಗ ಮತಗಳ್ಳತನ ಮಾಡಿದ್ದು ಯಾರು ಎಂದು ಕೇಳಿದರು. 1971-72ರಲ್ಲಿ ಮತಗಳ್ಳತನ ಆಗಿದೆ ಎಂದು ರಾಜ್ ನಾರಾಯಣ್ ಅವರು ಕೋರ್ಟಿಗೆ ಹೋದಾದ ಅಲಹಾಬಾದ್ ಹೈಕೋರ್ಟ್ ಕೊಟ್ಟ ತೀರ್ಪು ಏನು? ಆ ತೀರ್ಪಿನ ಮೂಲಕ ಈ ದೇಶದಲ್ಲಿ ನಡೆದ ಗಂಡಾಂತರ ಎಂತೆಂತವು? ಈ ದೇಶಕ್ಕೆ ಬಾಬಾಸಾಹೇಬರು ಕೊಟ್ಟ ಸಂವಿಧಾನಕ್ಕೆ ಎರಡೂವರೆ ವರ್ಷ ಜೀವವೇ ಇರಲಿಲ್ಲ. ಇವತ್ತು ಕೋರ್ಟ್‍ಗಳು ಹೇಗೆ ಕೆಲಸ ಮಾಡುತ್ತಿವೆ? ಕೋರ್ಟ್‍ಗಳು ಆಗ ಆದೇಶ ಕೊಡುವಂತಿರಲಿಲ್ಲ; ಎಂಥ ಆದೇಶಗಳಾದವು? ಎಂದು ಕೇಳಿದರು.
ಟಿ.ಎನ್.ಶೇಷನ್ ಅವರು ಚುನಾವಣಾ ಆಯೋಗದ ಕಮಿಷನರ್ ಆಗಿರದೇ ಇದ್ದರೆ ಈ ದೇಶದಲ್ಲಿ ಚುನಾವಣಾ ಆಯೋಗ ಸ್ವಾಯತ್ತ ಸಂಸ್ಥೆ ಎಂದು ಗೊತ್ತಾಗುತ್ತಿರಲಿಲ್ಲ ಎಂದರು.
ವಿಧಾನ ಪರಿಷತ್ ಸದಸ್ಯ ಕೇಶವಪ್ರಸಾದ್ ಎಸ್, ಬಿಜೆಪಿ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್, ಮಾಲೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಜುನಾಥ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಚಲಪತಿ ಅವರು ಉಪಸ್ಥಿತರಿದ್ದರು.

