Fri. Jan 10th, 2025

ಮಹಿಳೆಯರ ಕ್ಷಮೆಯಾಚಿಸುವಂತೆ ಹೆಚ್ ಡಿ ಕೆಗೆ ರೇಖಾ ಶ್ರೀನಿವಾಸ್ ಆಗ್ರಹ

Share this with Friends

ಮೈಸೂರು,ಏ.15: ಗ್ಯಾರಂಟಿ ಯೋಜನೆಯಿಂದ ಮಹಿಳೆಯರು ದಾರಿ ತಪ್ಪಿದ್ದಾರೆ ಎಂಬ ಮಾಜಿ‌ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಗೆ ಖಂಡನೆ ವ್ಯಕ್ತವಾಗಿದೆ.

ಮಹಿಳೆಯರು ದಾರಿ ತಪ್ಪಿದ್ದಾರೆ ಹೇಳಿರುವುದು ತೀವ್ರ ಖಂಡನಾರ್ಹ ಎಂದು ಕಾಂಗ್ರೆಸ್ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ರೇಖಾ ಶ್ರೀನಿವಾಸ್ ಹೇಳಿದ್ದಾರೆ.

ನಗರದ ಅಗ್ರಹರ ಸುತ್ತಮುತ್ತ ಮೈಸೂರು ಕೊಡಗು ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಎಂ ಲಕ್ಷ್ಮಣ್ ಪರವಾಗಿ ಮಹಿಳಾ ಕಾಂಗ್ರೆಸ್ ವತಿಯಿಂದ ಮತ ಯಾಚಿಸಿ,ಸರ್ಕಾರದ 5 ಗ್ಯಾರಂಟಿಗಳ ಮಾಹಿತಿ ಉಳ್ಳ ಕರ ಪತ್ರವನ್ನು ನೀಡಿ ರೇಖಾ ಶ್ರೀನಿವಾಸ್ ಮಾತನಾಡಿದರು.

ಚುನಾವಣೆಯಲ್ಲಿ ವಿರೋಧ ಪಕ್ಷಗಳ ವಿರುದ್ಧ ಮಾತನಾಡುವ ಭರದಲ್ಲಿ ಕುಮಾರಸ್ವಾಮಿ ಅವರು ಗ್ಯಾರಂಟಿ ಯೋಜನೆಯಿಂದ ತಾಯಂದಿರು ದಾರಿ ತಪ್ಪಿದ್ದಾರೆ ಎಂದು ಹೇಳುವ ಮೂಲಕ ತಮ್ಮ ವ್ಯಕ್ತಿತ್ವವನ್ನು ತೋರಿಸಿಕೊಂಡಿದ್ದಾರೆ ಎಂದು ಟೀಕಿಸಿದರು.

ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ ಮಹಿಳೆಯರ ಕುರಿತು ಕನಿಷ್ಠ ಗೌರವ ಇಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ತಕ್ಷಣ ಕುಮಾರಸ್ವಾಮಿ ಅವರು ರಾಜ್ಯದ ಮಹಿಳೆಯರಲ್ಲಿ ಬೇಷರತ್ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಈಗ ಭೀಕರ ಬರಗಾಲವಿದೆ. ಕೋವಿಡ್ ಹೊಡೆತದಿಂದ ಇನ್ನೂ ಜನ ಹೊರಬಂದಿಲ್ಲ. ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳು ಮಹಿಳೆಯರ ಬದುಕಿಗೆ ಅಲ್ಪ ಸ್ವಲ್ಪ ಆಸರೆಯಾಗಿದೆ ಎಂಬ ಕನಿಷ್ಠ ಪ್ರಜ್ಞೆಯೂ ಅವರಿಗೆ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಹಿಳೆಯರ ಬಗ್ಗೆ ಕೀಳು ಮನೋಭಾವ ಸೂಚಿಸುವ ಮಾತುಗಳನ್ನು ನುಡಿದ ಕುಮಾರಸ್ವಾಮಿ ಅವರ ಜಾತ್ಯಾತೀತ ಜನತಾದಳ ಪಕ್ಷಕ್ಕೆ ಮತ್ತು ಅವರು ಬೆಂಬಲಿಸುವ ಭಾರತೀಯ ಜನತಾ ಪಕ್ಷಕ್ಕೆ ಯಾವುದೇ ಕಾರಣಕ್ಕೆ ಮತ ಹಾಕಬಾರದು ಎಂದು ಮನವಿ ಮಾಡಿದರು.

ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಕೃಷ್ಣ ಕುಮಾರಿ, ಮಾಜಿ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದ ಸುಶೀಲ ಕೇಶವಮೂರ್ತಿ, ಮಹಿಳಾ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ಲತಾ ಮೋಹನ್ ಸೇರಿದಂತೆ ಕಾಂಗ್ರೆಸ್ ಮಹಿಳಾ ಮುಖಂಡರು ಹಾಜರಿದ್ದರು.


Share this with Friends

Related Post