Thu. Mar 5th, 2026

ರಾಜ್ಯದ ಸಾಲ 8.14 ಲಕ್ಷ ಕೋಟಿ ರೂ. ತಲುಪಲಿದೆ ಎಂಬ ವರದಿ ಆಧಾರರಹಿತ: ಆರ್ಥಿಕ ಇಲಾಖೆ ಸ್ಪಷ್ಟನೆ

Share this with Friends

ಬೆಂಗಳೂರು: ರಾಜ್ಯದ ಒಟ್ಟು ಹೊಣೆಗಾರಿಕೆಗಳು 2025-26ನೇ ಸಾಲಿನಲ್ಲಿ 8.14 ಲಕ್ಷ ಕೋಟಿ ರೂ. ತಲುಪಲಿವೆ ಎಂಬ ಇತ್ತೀಚಿನ ಪತ್ರಿಕಾ ವರದಿ ಹಾಗೂ ಆರ್‌ಬಿಐ ಅಂಕಿ-ಅಂಶಗಳನ್ನು ರಾಜ್ಯ ಆರ್ಥಿಕ ಇಲಾಖೆ ತಳ್ಳಿಹಾಕಿದೆ. ಈ ಲೆಕ್ಕಾಚಾರವು ವಾಸ್ತವಾಂಶಕ್ಕಿಂತ ಹೆಚ್ಚಿನದಾಗಿದ್ದು, ತಾಂತ್ರಿಕ ದೋಷಗಳಿಂದ ಕೂಡಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ವಾಸ್ತವ ಅಂಕಿ-ಅಂಶಗಳು:

ಸರ್ಕಾರದ ಸ್ಪಷ್ಟನೆಯ ಪ್ರಕಾರ, 2025-26ನೇ ಸಾಲಿನ ಆಯವ್ಯಯದ ಅಂದಾಜಿನಂತೆ ಮಾರ್ಚ್ 2026ರ ಅಂತ್ಯಕ್ಕೆ ರಾಜ್ಯದ ಒಟ್ಟು ಹೊಣೆಗಾರಿಕೆಗಳು 7,64,655 ಕೋಟಿ ರೂ. ಗಳಾಗಿರಲಿವೆ. ಇದು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (ಜಿ.ಎಸ್.ಡಿ.ಪಿ) ಶೇ. 24.91 ರಷ್ಟಿರಲಿದ್ದು, ನಿಗದಿತ ಶೇ. 25ರ ಮಿತಿಯೊಳಗೇ ಇರಲಿದೆ.

60,500 ಕೋಟಿ ರೂ. ವ್ಯತ್ಯಾಸಕ್ಕೆ ಕಾರಣಗಳೇನು?

ಆರ್‌ಬಿಐ ವರದಿಯಲ್ಲಿ ಸುಮಾರು 60,500 ಕೋಟಿ ರೂ.ಗಳನ್ನು ತಪ್ಪಾಗಿ ಹೊಣೆಗಾರಿಕೆ ಪಟ್ಟಿಗೆ ಸೇರಿಸಲಾಗಿದೆ ಎಂದು ಇಲಾಖೆ ವಿವರಿಸಿದೆ:

ಕೇಂದ್ರದ ಜಿಎಸ್‌ಟಿ ಸಾಲ (₹20,412 ಕೋಟಿ): ರಾಜ್ಯಗಳ ಪರವಾಗಿ ಕೇಂದ್ರ ಸರ್ಕಾರ ಪಡೆದಿರುವ ಈ ಸಾಲದ ಹೊಣೆಗಾರಿಕೆ ಕೇಂದ್ರದ್ದೇ ಹೊರತು ರಾಜ್ಯದ್ದಲ್ಲ.

ಸೆಸ್ ಮೊತ್ತದ ಪುನರಾವರ್ತಿತ ಲೆಕ್ಕ (₹23,810 ಕೋಟಿ): ಮೂಲಸೌಕರ್ಯಕ್ಕಾಗಿ ಸಾರ್ವಜನಿಕ ಖಾತೆಯಲ್ಲಿರುವ ಸೆಸ್ ಹಣವನ್ನು ಎರಡು ಬಾರಿ ಪರಿಗಣಿಸಲಾಗಿದೆ.

ಹೂಡಿಕೆ ನಿಧಿಗಳು (₹16,300 ಕೋಟಿ): ಆರ್‌ಬಿಐ ಶಿಫಾರಸಿನಂತೆ ಋಣ ನಿರ್ವಹಣೆಗಾಗಿ ‘Consolidated Sinking Fund’ ಮತ್ತು ‘Guarantee Redemption Fund’ಗಳಲ್ಲಿ ರಾಜ್ಯ ಸರ್ಕಾರ ಹೂಡಿಕೆ ಮಾಡಿದೆ. ಇವು ರಾಜ್ಯದ ಆಸ್ತಿಗಳೇ ಹೊರತು ಹೊಣೆಗಾರಿಕೆಗಳಲ್ಲ.

ಈ ತಾಂತ್ರಿಕ ಅಂಶಗಳನ್ನು ಮರು ವರ್ಗೀಕರಿಸಿ, ಲೆಕ್ಕ ಹೊಂದಾಣಿಕೆ ಮಾಡುವಂತೆ ಈಗಾಗಲೇ ಮಹಾಲೇಖಪಾಲರಿಗೆ (AG) ಸರ್ಕಾರ ಸೂಚಿಸಿದೆ.

ಕಳೆದ 4 ವರ್ಷಗಳ ಸಾಲದ ವಿವರ:

ರಾಜ್ಯದ ಸಾಲದ ಪ್ರಮಾಣವು ಜಿ.ಎಸ್.ಡಿ.ಪಿ ಗೆ ಹೋಲಿಸಿದರೆ ಕಳೆದ ನಾಲ್ಕು ವರ್ಷಗಳಲ್ಲಿ ಸ್ಥಿರವಾಗಿದೆ:

2022-23: ₹5,22,847 ಕೋಟಿ (23.97%)

2023-24: ₹6,03,015 ಕೋಟಿ (23.49%)

2024-25: ₹6,84,428 ಕೋಟಿ (23.91%)

2025-26 (ಅಂದಾಜು): ₹7,64,655 ಕೋಟಿ (24.91%)

ಆರ್‌ಬಿಐ ವರದಿಯಲ್ಲಿ ಉಲ್ಲೇಖಿಸಿರುವ ಶೇ. 26.5ರಷ್ಟು ಸಾಲದ ಪ್ರಮಾಣವು ವಾಸ್ತವಕ್ಕೆ ದೂರವಾಗಿದ್ದು, ರಾಜ್ಯದ ಆರ್ಥಿಕ ಪರಿಸ್ಥಿತಿ ಸುಸ್ಥಿರವಾಗಿದೆ ಎಂದು ಆರ್ಥಿಕ ಇಲಾಖೆ ತಿಳಿಸಿದೆ.

 


Share this with Friends

Related Post