Tue. Dec 24th, 2024

ಬೋರ್‌‌ ವೆಲ್ ಗೆ ಬಿದ್ದಿದ್ದ ಮಗು‌ ರಕ್ಷಣೆ:ಬದುಕಿ ಬಂದ ಸಾತ್ವಿಕ್

Share this with Friends

ವಿಜಯಪುರ,ಏ.4: ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಬೋರ್‌‌ ವೆಲ್ ಗೆ ಬಿದ್ದಿದ್ದ ಮಗು‌ವನ್ನು ಜೀವಂತವಾಗಿ ಹೊರತೆಗೆಯಲಾಗಿದ್ದು ಇಡೀ ರಾಜ್ಯದ ಜನತೆ ದೇವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ
ಲಚ್ಯಾಣ ಗ್ರಾಮದಲ್ಲಿ ನಿನ್ನೆ ಸಂಜೆ‌ ತೆರೆದ ಬೋರ್‌ವೆಲ್‌ಗೆ 1.5 ವರ್ಷದ ಮಗು ಸಾತ್ವಿಕ್ ಆಟವಾಡುತ್ತಾ ಆಕಸ್ಮಿಕವಾಗಿ ಬಿದ್ದಿತ್ತು.

ತೆರೆದ ಬೋರ್‌ವೆಲ್‌ಗೆ ಬಿದ್ದ ಮಗುವನ್ನು 20 ಗಂಟೆಗಳ ಕಾರ್ಯಾಚರಣೆಯ ನಂತರ ರಕ್ಷಿಸಲಾಗಿದೆ.

ಸತತ 20 ಗಂಟೆ ರಕ್ಷಣಾ ಕಾರ್ಯಾಚರಣೆಯ ನಂತರ ಎನ್ ಡಿ ಆರ್ ಎಫ್ ಮತ್ತು ಎಸ್ ಡಿ ಆರ್ ಎಫ್ ತಂಡಗಳ ಸಿಬ್ಬಂದಿ ಸಾತ್ವಿಕ್ ನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಗುವನ್ನು ಹೊರಗೆ ಕರೆತರುತ್ತಿದ್ದಂತೆ ನೆರೆದಿದ್ದ ಜನತೆ ಹರ್ಷೋದ್ಘಾರ ಮಾಡಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

ಮಗುವಿನ ತಾಯಿಯಂತೂ ಮಗು ಬದುಕಿದ್ದು ಕಂಡು ಆನಂದಬಾಷ್ಪ ಸುರಿಸಿದರು,ಎತ್ತಿ ಮುದ್ದಾಡಿದರು.ಆದರೆ ಮಗು 20 ಗಂಟೆ ಕಾಲ ಕೊಳವೆ ಬಾವಿಯೊಳಗೆ ಜೀವನ್ಮರಣದ ನಡುವೆ ಹೋರಾಡಿ ಬದುಕಿ ಬಂದಿದ್ದು ಬಹಳ‌ ಗಾಬರಿಗೊಳಗಾಗಿದೆ.

ತಾಯಿಯ ಮಡಿಲಿನಲ್ಲೇ ಸಾತ್ವಿಕ್ ಗೆ ಪ್ರಥಮ ಚಿಕಿತ್ಸೆ ನೀಡಿ ಆಮ್ಲಜನಕ ಕೊಟ್ಟು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಎನ್ ಡಿ ಆರ್ ಎಫ್ ಮತ್ತು ಎಸ್ ಡಿ ಆರ್ ಎಫ್ ತಂಡಗಳ ಸಿಬ್ಬಂದಿಗೆ ರಾಜ್ಯಾದ್ಯಂತ ಅಭಿನಂದನೆಗಳ ಸುರಿಮಳೆ,ಮೆಚ್ಚುಗೆ ವ್ಯಕ್ತವಾಗಿದೆ.


Share this with Friends

Related Post