ಬೆಂಗಳೂರು:ಫಿಲಿಪೈನ್ಸ್ ದೇಶದಲ್ಲಿ 25 ರಿಂದ 30 ದಿನಗಳ ಕಾಲ ಮಳೆ ನಿರಂತರವಾಗಿ ಬಂದರೂ ಹಾನಿಯಾಗದಂತಹ ಭತ್ತದ ತಳಿಯನ್ನು ಕಂಡು ಹಿಡಿದಿದ್ದು, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿವಿಯಲ್ಲೂ ನಮ್ಮ ವಿಜ್ಞಾನಿಗಳು ರೈತರಿಗೆ ಇಂತಹ ತಳಿ ಸಂಶೋಧಿಸಿದ್ದಾರೆ ಕೃಷಿ ವಿವಿಗಳು ಈ ರೀತಿ ರೈತರಿಗೆ ನೆರವಾಗಬೇಕು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಕರೆ ನೀಡಿದರು.
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಲ್ಲಿ ಸಮೃದ್ಧ ಕೃಷಿ -ವಿಕಸಿತ ಭಾರತ ನೆಲ,ಜಲ ಮತ್ತು ಬೆಳೆ ಶೀರ್ಷಿಕೆ ಅಡಿಯಲ್ಲಿ ಇಂದಿನಿಂದ ನಾಲ್ಕು ದಿನಗಳವರೆಗೆ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಏರ್ಪಡಿಸಲಾಗಿರುವ ಕೃಷಿ ಮೇಳ 2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಉತ್ತಮ ತಳಿಗಳನ್ನು ಈ ಭಾರಿಯ ಕೃಷಿ ಮೇಳದಲ್ಲಿ ಬಿಡುಗಡೆಗೊಳಿಸಿದೆ. ರೈತರಿಗೆ ಕೃಷಿ ವಿವಿಗಳು ನೀಡಬೇಕಾಗಿರುವುದು ಇದನ್ನೆ. ಕಡಿಮೆ ವೆಚ್ಚದಲ್ಲಿ ಉತ್ತಮ ಇಳುವರಿ ಮತ್ತು ಆದಾಯ ನೀಡುವ ಬೆಳೆಗಳನ್ನು ನೀಡುವ ಉದ್ದೇಶದಿಂದ ಇಂತಹ ಕೃಷಿ ಮೇಳಗಳನ್ನು ಆಯೋಜಿಸಲಾಗಿದ್ದು, ಇದನ್ನು ಬಳಸಿಕೊಂಡು ರೈತರು ಉದ್ಯಮಿಗಳಾಗಿ ಬಲವರ್ಧನೆಗೊಳ್ಳಬೇಕೆಂದರು.
ಕೃಷಿಯನ್ನು ಉದ್ದಿಮೆಯಾಗಿ ಪರಿವರ್ತಿಸಿ ರೈತರಿಗೆ ಉತ್ತಮ ಆದಾಯ ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಸೌಲಭ್ಯಗಳು ಹಾಗೂ ಕಾರ್ಯಕ್ರಮಗಳನ್ನು ನೀಡುತ್ತಿವೆ.ಕೆಪೆಕ್ ಸಂಸ್ಥೆಯೂ ಪಿಎಂಎಫ್ಎಂಇ ಯೋಜನೆಯಡಿಯಲ್ಲಿ ರಾಜ್ಯದಲ್ಲಿ 5 ಸಾವಿರ ಉದ್ಯಮಿಗಳಿಗೆ 15 ಲಕ್ಷ ಸಬ್ಸಿಡಿ ನೀಡಿದೆ ಎಂದು ಸಚಿವರು ಹೇಳಿದರು.
ರೈತರ ಬದುಕು ಹಸನು ಮಾಡುವುದು ನಮ್ಮ ಹೊಣೆ .ಕೃಷಿ ಸಂಶೋಧನೆ, ಮೌಲ್ಯ ವರ್ಧನೆಗೆ ಹೆಚ್ಚು ಒತ್ತು ನೀಡಬೇಕು . ಇಳುವರಿಯೂ ವೃದ್ಧಿಸಬೇಕು. ರೈತರು ವೈಜ್ಞಾನಿಕ ಹಾಗೂ ಸಮಗ್ರ ಬೇಸಾಯದ ಬಗ್ಗೆ ಎಚ್ಚು ಗಮನ ಹರಿಸಬೇಕು, ಕೃಷಿಯನ್ನು ಲಾಭದಾಯಕ ವೃತ್ತಿಯನ್ನಾಗಿ ಪರಿವರ್ತಿಸಬೇಕು ಇದಕ್ಕೆ ಕೃಷಿ ವಿವಿಗಳು ನೆರವಾಗಬೇಕು ಎಂದರು.
ರೈತರ ಬೆಲೆಗಳಿಗೆ ನ್ಯಾಯಯುತ ಬೆಲೆ , ಸೂಕ್ತ ಮಾರುಕಟ್ಟೆ ವ್ಯವಸ್ಥೆ ಜೊತೆಗೆ ಸಂಶೋಧನೆಗಳ ವೈಜ್ಞಾನಿಕ ಅನುಷ್ಠಾನ, ಬರ ನಿರ್ವಹಣೆ ಮಾಡಿದಾಗ ಮಾತ್ರ ಸುಸ್ಥಿರ ಕೃಷಿ ಸಾಧ್ಯ ಎಂದು ಚಲುವರಾಸ್ವಾಮಿಯವರು ಅಭಿಪ್ರಾಯ ಪಟ್ಟರು.
ರೈತ ಸಾಧಕರಿಗೆ ಸನ್ಮಾನ;
ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೂವರು ಪ್ರಗತಿಪರ ರೈತರಿಗೆ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.

