ಬೆಂಗಳೂರು: ತಮಿಳುನಾಡು ಸರ್ಕಾರದ ಮಾದರಿಯಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿಬಿ-ಜಿ ರಾಮ್ ಜಿ (VB-G RAM G) ಕಾಯ್ದೆಯನ್ನು ವಿರೋಧಿಸಿ ಮತ್ತು ಮನರೇಗಾ (MGNREGA) ಯೋಜನೆಯನ್ನು ಹಳೆಯ ಮಾದರಿಯಲ್ಲೇ ಮರುಜಾರಿಗೊಳಿಸುವಂತೆ ಒತ್ತಾಯಿಸಿ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ್ದಾರೆ.
ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ನಿರ್ಣಯ ಮಂಡಿಸಿ ಮಾತನಾಡಿದ ಸಿಎಂ,ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯಲ್ಲಿ ಉದ್ಯೋಗವು ಪ್ರತಿಯೊಬ್ಬ ವ್ಯಕ್ತಿಯ ‘ಹಕ್ಕು’ ಹಾಗೂ ‘ಬೇಡಿಕೆ ಆಧಾರಿತ’ವಾಗಿತ್ತು. ಆದರೆ ಹೊಸ ಕಾಯ್ದೆಯಲ್ಲಿ ಇದನ್ನು ಕೇಂದ್ರ ಸರ್ಕಾರ ರೂಪಿಸುವ ಮಾನದಂಡಗಳ ಹಂಗಿಗೆ ಒಳಪಡಿಸಿ ಜನರ ಹಕ್ಕನ್ನು ಕಸಿದುಕೊಳ್ಳಲಾಗಿದೆ. ದೆಹಲಿಯ ದಂತ ಗೋಪುರದಲ್ಲಿ ಕುಳಿತು ಯೋಜನೆಗಳನ್ನು ರೂಪಿಸುವ ಮೂಲಕ, ಗ್ರಾಮಸಭೆಗಳ ಅಧಿಕಾರವನ್ನು ಕಿತ್ತುಕೊಳ್ಳಲಾಗಿದೆ. ಗ್ರಾಮ ಪಂಚಾಯತಿಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಕಾಮಗಾರಿಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಕಳೆದುಕೊಂಡಿವೆ. ಕೇಂದ್ರ ಸರ್ಕಾರ ಆಯ್ಕೆ ಮಾಡಿದ ಪಂಚಾಯತಿಗಳಲ್ಲಿ ಮಾತ್ರ ಯೋಜನೆ ಜಾರಿಯಾಗುತ್ತಿದ್ದು, ಉಳಿದ ಕಡೆಗಳಲ್ಲಿ ಉದ್ಯೋಗದ ಹಕ್ಕನ್ನು ನಿರಾಕರಿಸಲಾಗಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯಡಿ ನಮ್ಮ ಹೊಲ-ನಮ್ಮ ದಾರಿ, ದನದ ಕೊಟ್ಟಿಗೆ, ಕುರಿ ದೊಡ್ಡಿ, ಕಣ, ಶಾಲಾ ಕಾಂಪೌಂಡ್,ಶೌಚಾಲಯ, ಬದು, ಹೊಳಗಟ್ಟಿ, ಪಂಚಾಯತಿ ಕಟ್ಟಡ (ರಾಜೀವ ಗಾಂಧಿ ಸೇವಾ ಕೇಂದ್ರ), ತೋಟಗಾರಿಕೆ ಬೆಳೆಗಳು, ಆಟದ ಮೈದಾನದಂತಹ ಸ್ಥಳೀಯವಾಗಿ ಅಗತ್ಯವಿರುವ ಗ್ರಾಮೀಣ ಆಸ್ತಿಗಳನ್ನು ನಿರ್ಮಿಸಲಾಗುತ್ತಿತ್ತು. ಹೊಸ ಕಾಯ್ದೆಯನ್ನು ‘ಪಿ.ಎಂ ಗತಿಶಕ್ತಿ’ ಯೋಜನೆಗೆ ಜೋಡಿಸಿರುವುದರಿಂದ, ದೊಡ್ಡ ರಸ್ತೆಗಳು ಮತ್ತು ಹೈವೆಗಳ ನಿರ್ಮಾಣಕ್ಕೆ ಬಳಕೆಯಾಗುತ್ತಿದ್ದು, ಇದು ಪರೋಕ್ಷವಾಗಿ ಗುತ್ತಿಗೆದಾರರು ಮತ್ತು ಕಾರ್ಪೊರೇಟ್ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆಯಾಗಿ ಮಾರ್ಪಟ್ಟಿದೆ. ಇದು ಬಡವರ ಕೈಯಿಂದ ಅನ್ನ ಕಸಿದುಕೊಂಡು ಉಳ್ಳವರನ್ನು ಇನ್ನಷ್ಟು ಶ್ರೀಮಂತರನ್ನಾಗಿ ಮಾಡುವ ಯೋಜನೆಯಾಗಿದೆ.ಈ ಹೊಸ ಕಾಯ್ದೆಯು ವರ್ಷಕ್ಕೆ 12 ತಿಂಗಳ ಬದಲು ಕೇವಲ 10 ತಿಂಗಳು ಮಾತ್ರ ಕೆಲಸಕ್ಕೆ ಅವಕಾಶ ನೀಡುತ್ತದೆ. ವಿಬಿ-ಗ್ರಾಮ್-ಜಿ ಕಾಯ್ದೆಯಡಿ ಎಲ್ಲಾ ಗ್ರಾಮ ಪಂಚಾಯತಿಗಳು ಸೇರ್ಪಡೆಗೊಳ್ಳುವ ಖಚಿತತೆ ಇಲ್ಲ ಹಾಗೂ ಕಾರ್ಮಿಕರಿಗೆ ನೀಡಲಾಗುವ ಕೂಲಿ ದರದ ಬಗ್ಗೆ ಯಾವುದೇ ಖಚಿತತೆ / ಖಾತ್ರಿ ಇಲ್ಲ. ಈ ಅನಿಶ್ಚಿತತೆಯು ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು ವಿಶೇಷವಾಗಿ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾರ್ಮಿಕರು, ಆದಿವಾಸಿಗಳು, ರೈತಾಪಿ ಜನರ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ. ಗ್ರಾಮೀಣ ಭಾಗದ ಕೂಲಿ ಕಾರ್ಮಿಕರನ್ನು ಆಧುನಿಕ ಗುಲಾಮಗಿರಿಗೆ ತಳ್ಳುವ ಪ್ರಯತ್ನವಾಗಿದೆ.ಆದುದರಿಂದ, ಕರ್ನಾಟಕ ವಿಧಾನಸಭೆಯು ಕೇಂದ್ರದ ಈ ನಡೆಯನ್ನು ತೀವ್ರವಾಗಿ ವಿರೋಧಿಸುತ್ತದೆ ಎಂದು ಈ ಸದನವು ಅಭಿಪ್ರಾಯಪಡುತ್ತದೆ ಎಂದರು.
“ಕರ್ನಾಟಕ ರಾಜ್ಯದ ಗ್ರಾಮೀಣ ಜನರ ಬದುಕಿನ ಹಕ್ಕನ್ನು ಕಾಪಾಡುವ ದೃಷ್ಟಿಯಿಂದ, ಒಕ್ಕೂಟ ತತ್ವಕ್ಕೆ ವಿರೋಧವಾಗಿರುವ ಮತ್ತು ರಾಜ್ಯದ ಬೊಕ್ಕಸಕ್ಕೆ ತೀವ್ರ ಹೊರೆ ಉಂಟುಮಾಡುವ ‘ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ) (VB-GRAM-G)’ ಕಾಯ್ದೆಯನ್ನು ಕೇಂದ್ರ ಸರ್ಕಾರವು ತಕ್ಷಣವೇ ರದ್ದುಗೊಳಿಸಬೇಕು.ವಿಕೇಂದ್ರೀಕರಣ ತತ್ವಕ್ಕೆ ವಿರುದ್ಧವಾಗಿರುವ ಗ್ರಾಮ ಪಂಚಾಯತಿಗಳ ಅಧಿಕಾರ ಮತ್ತು ಹಕ್ಕುಗಳನ್ನು ಕಸಿದುಕೊಂಡಿರುವ ಈ ಕಾಯ್ದೆಯನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮೀಣ ಆಸ್ತಿ ಸೃಜನೆಗೆ ಮತ್ತು ಬಡವರ ಸ್ವಾವಲಂಬನೆಗೆ ಕಾರಣವಾಗಿದ್ದ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ’ (MGNREGA) ಯನ್ನು ಈ ಹಿಂದಿನಂತೆ ಅದರ ಮೂಲ ಸ್ವರೂಪದಲ್ಲಿಯೇ ಮರುಸ್ಥಾಪಿಸಬೇಕು ಎಂದು ಈ ಸದನವು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತದೆ.” ಆದುದರಿಂದ, ಕೇಂದ್ರ ಸರ್ಕಾರಕ್ಕೆ ಹಾಗೂ ರಾಷ್ಟ್ರಪತಿಗಳಿಗೆ ನಿರ್ಣಯವನ್ನು ಕಳುಹಿಸಿಕೊಡಬೇಕೆಂದು ಈ ಸದನವು ನಿರ್ಣಯಿಸುತ್ತದೆ ಎಂದು ತಿಳಿಸಿದರು.

