Sat. Mar 7th, 2026

ಟೋಲ್ ನಲ್ಲಿ ನಿವೃತ್ತ ಯೋಧ ಶ್ಯಾಮರಾಜ್ ರಿಗೆ ಅವಮಾನ: ತನಿಖೆಗೆ ಸೂಚನೆ

Share this with Friends

ಉಡುಪಿ:ಕಾಸರಗೋಡು ಮೂಲದ ನಿವೃತ್ತ ಆರ್ಮಿ ಕಮಾಂಡರ್ ಶ್ಯಾಮರಾಜ್ ಅವರಿಗೆ ಕೋಟಾ ಸಮೀಪದ ಸಾಸ್ತಾನದ ಟೋಲ್ ನಲ್ಲಿ ಟೋಲ್ ಸಿಬ್ಬಂದಿಯಿಂದ ಅವಮಾನವಾದ ಘಟನೆ ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸುವಂತೆ ಜಿಲ್ಲಾಡಳಿತಕ್ಕೆ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಆದೇಶ ನೀಡಿದ್ದಾರೆ.

ಟೋಲ್ ನಲ್ಲಿ ಉಚಿತ ಪ್ರಯಾಣ ಮಾಡಲು ನಿವೃತ್ತ ಯೋಧರಿಗೆ ಅವಕಾಶವಿದ್ದು ಅಗತ್ಯ ದಾಖಲೆ ಹೊಂದಿದ್ದರೂ ಟೋಲ್ ಸಿಬ್ಬಂದಿ ಟೋಲ್ ದಾಟಲು ಅವಕಾಶ ನೀಡದೆ ಅವಮಾನವೆಸಗಿದ್ದಾರೆ. ಸಿಬ್ಬಂದಿಯ ಉದ್ಧಟತನದಿಂದ ತೀವ್ರ ಮನನೊಂದ ಶ್ಯಾಮರಾಜ್ ಅವರು ಸ್ಥಳದಲ್ಲೇ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ‘ಗಣರಾಜ್ಯೋತ್ಸವ ದಿನದಂದೇ ಯೋಧನಿಗೆ ಇಂತಹ ಅವಮಾನವೇ?’ ಎಂದು ಕಮಾಂಡರ್ ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಲ್ಲೆಡೆಯಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ನಿವೃತ್ತ ಸೇನಾ ಕಮಾಂಡರ್ ಶ್ಯಾಮರಾಜ್ ಅವರಿಗೆ ಸಾಸ್ತಾನದ ಟೋಲ್ ಗೇಟ್‌ನಲ್ಲಿ ಆಗಿರುವ ಅಪಮಾನಕಾರಿ ವಿದ್ಯಮಾನ ನೋವಿನ ಸಂಗತಿ. ತಕ್ಷಣ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು  ಉಡುಪಿ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇನ್ನು ಮುಂದೆ ಇಂತಹಾ ಘಟನೆಗಳು ಮರುಕಳಿಸದಂತೆ, ರಾಷ್ಟ್ರಸೇವಕ ಸೈನಿಕರಿಗೆ ಅಪಮಾನ ಆಗದಂತೆ ಎಚ್ಚರ ವಹಿಸುವುದು ನಮ್ಮೆಲ್ಲರ ಜವಬ್ದಾರಿ ಎಂದು ತಿಳಿಸಿದ್ದಾರೆ.

ವಿಡಿಯೋ ವೈರಲ್ ಆಗಿ ಸಾರ್ವಜನಿಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಟೋಲ್ ಸಿಬ್ಬಂದಿ ಕಡೆಗೂ ತಮ್ಮಹಠ ಬಿಟ್ಟು ಕ್ಷಮೆ ಯಾಚಿಸಿದ್ದಾರೆ ,ಈ ಬಗ್ಗೆ ನಮಗೆ ಸರಿಯಾದ ಮಾಹಿತಿ ಇರಲಿಲ್ಲ. ಮೇಲಧಿಕಾರಿಗಳಿಂದ ಖಚಿತಪಡಿಸುವುದು ತಡವಾಗಿದ್ದೇ ಗೊಂದಲಕ್ಕೆ ಕಾರಣ,ನಮ್ಮಿಂದಾದ ತಪ್ಪಿಗೆ ಯೋಧರಲ್ಲಿ ಕ್ಷಮೆ ಯಾಚಿಸುತ್ತೇವೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.


Share this with Friends

Related Post