ಬೆಂಗಳೂರು,ಮೇ.4: ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣ ಸಂಬಂಧ ರೇವಣ್ಣ ಅವರು ನಿರೀಕ್ಷಣಾ ಜಾಮೀನು ಪಡೆಯಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮೊರೆ ಹೋದರು.
ಇಂದು ವಾದ- ಪ್ರತಿವಾದ ಆಲಿಸಿದ ಕೋರ್ಟ್ ರೇವಣ್ಣ ಅವರ ಜಾಮೀನು ಅರ್ಜಿ ನಿರಾಕರಿಸಿತು.
ಇತ್ತ ಅರ್ಜಿ ವಜಾ ಆಗುತ್ತಿದ್ದಂತೆಯೇ ಎಸ್‌ಐಟಿ ಅಧಿಕಾರಿಗಳು ಹೆಚ್.ಡಿ ದೇವೇಗೌಡರ ಮನೆಗೆ ದೌಡಾಯಿಸಿದರು. ಅರ್ಧ ಗಂಟೆಯ ಬಳಿಕ ಮನೆಯಿಂದ ರೇವಣ್ಣ ಅವರು ಹೊರಗಡೆ ಬಂದರು.
ಈ ವೇಳೆ ಅಧಿಕಾರಿಗಳು ರೇವಣ್ಣ ಅವರನ್ನು ವಶಕ್ಕೆ ಪಡೆದು ಕರೆದುಕೊಂಡು ಹೋಗಿದ್ದಾರೆ. ವೈದ್ಯಕೀಯ ಪರೀಕ್ಷೆ ಬಳಿಕ ಎಸ್‌ಐಟಿ ಕಚೇರಿಯಲ್ಲಿ ತನಿಖೆ ನಡೆಸಲಾಗುತ್ತದೆ.