Fri. Mar 6th, 2026

 “ಉಪ್ಪಿನ ಮಿತಿ – ಉತ್ತಮ ಸ್ಥಿತಿ”: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಂದ ಹೊಸ ಕೈಪಿಡಿ ಬಿಡುಗಡೆ

Share this with Friends

ಬೆಂಗಳೂರು: ರಾಜ್ಯದಲ್ಲಿ ಅಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಮತ್ತು ಸಾರ್ವಜನಿಕರಲ್ಲಿ ಆರೋಗ್ಯಕರ ಆಹಾರ ಪದ್ಧತಿಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡುರಾವ್ ಅವರು ಮಹತ್ವದ ಹೆಜ್ಜೆಯನ್ನಿಟ್ಟಿದ್ದಾರೆ.

ಮಲ್ಲೇಶ್ವರಂನಲ್ಲಿ ನಡೆದ ಕಾರ್ಯಕ್ರಮದಲ್ಲಿ “Addressing Dietary Risk Factors, including Salt Reduction” ಎಂಬ ವಿಶೇಷ ತರಬೇತಿ ಕೈಪಿಡಿಯನ್ನು ಅವರು ಅಧಿಕೃತವಾಗಿ ಅನಾವರಣಗೊಳಿಸಿದರು.ನಂತರ ಮಾತನಾಡಿದ ಸಚಿವರು,”ನಾವು ಸಾಮಾನ್ಯವಾಗಿ ಆಹಾರದಲ್ಲಿನ ಕೊಬ್ಬು ಮತ್ತು ಸಕ್ಕರೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತೇವೆ, ಆದರೆ ಉಪ್ಪಿನ ಅತಿಯಾದ ಸೇವನೆಯಿಂದಾಗುವ ಅಪಾಯಗಳನ್ನು ನಿರ್ಲಕ್ಷಿಸುತ್ತಿದ್ದೇವೆ. ವಿಶೇಷವಾಗಿ ಯುವಜನತೆಯಲ್ಲಿ ಕಂಡುಬರುತ್ತಿರುವ ಹೃದಯಾಘಾತ ಮತ್ತು ಪಾರ್ಶ್ವವಾಯು ಪ್ರಕರಣಗಳಿಗೆ ಆಹಾರದಲ್ಲಿನ ಅತಿಯಾದ ಸೋಡಿಯಂ ಅಂಶವೇ ಪ್ರಮುಖ ಕಾರಣ” ಎಂದು ಕಳವಳ ವ್ಯಕ್ತಪಡಿಸಿದರು.

ಸಾರ್ವಜನಿಕರು ದಿನಕ್ಕೆ 5 ಗ್ರಾಂ ಗಿಂತ ಕಡಿಮೆ ಉಪ್ಪನ್ನು ಬಳಸುವಂತೆ ಜಾಗೃತಿ ಮೂಡಿಸಲು ಈ ಕೈಪಿಡಿಯು ಆರೋಗ್ಯ ಕಾರ್ಯಕರ್ತರಿಗೆ ಮಾರ್ಗದರ್ಶಿಯಾಗಲಿದೆ ಎಂದು ಅವರು ತಿಳಿಸಿದರು. ಶೀಘ್ರದಲ್ಲೇ ಉಪ್ಪಿನ ಬಳಕೆಯನ್ನು ನಿಯಂತ್ರಿಸಲು ವೈಜ್ಞಾನಿಕ ಚೌಕಟ್ಟನ್ನು (Framework) ಸಿದ್ಧಪಡಿಸಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಘೋಷಿಸಿದರು.

ಆರೋಗ್ಯ ಕಾರ್ಯಕರ್ತರ ಸಾಮರ್ಥ್ಯ ವೃದ್ಧಿ:

ಈ ಕೈಪಿಡಿಯನ್ನು ಕರ್ನಾಟಕದಾದ್ಯಂತ ಇರುವ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಲು ರೂಪಿಸಲಾಗಿದೆ. ವಿಶೇಷವಾಗಿ ಅಧಿಕ ಉಪ್ಪಿನ ಸೇವನೆಯಿಂದ ಉಂಟಾಗುವ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು, ಮಧುಮೇಹ ಮತ್ತು ಮೂತ್ರಪಿಂಡದ ಸಮಸ್ಯೆಗಳಂತಹ ಅಸಾಂಕ್ರಾಮಿಕ ರೋಗಗಳನ್ನು (NCDs) ನಿಯಂತ್ರಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ವೈಜ್ಞಾನಿಕ ಮಾರ್ಗದರ್ಶನ:

ಕೈಪಿಡಿಯು ಆರೋಗ್ಯಕರ ಆಹಾರ ಪದ್ಧತಿ, ದಿನನಿತ್ಯ ಬಳಸಬೇಕಾದ ಉಪ್ಪಿನ ನಿಖರ ಪ್ರಮಾಣ, ಕಡಿಮೆ ಸೋಡಿಯಂ ಇರುವ ಉಪ್ಪಿನ ಪರ್ಯಾಯಗಳ ಬಳಕೆ ಹಾಗೂ ರೋಗಿಗಳಿಗೆ ನೀಡಬೇಕಾದ ಆಹಾರ ಸಲಹೆಗಳ ಬಗ್ಗೆ ವೈಜ್ಞಾನಿಕ ಮತ್ತು ಪ್ರಾಯೋಗಿಕ ಮಾಹಿತಿಯನ್ನು ಒಳಗೊಂಡಿದೆ. ಇದು ಕೇಂದ್ರ ಸರ್ಕಾರದ ‘ಅಸಾಂಕ್ರಾಮಿಕ ರೋಗಗಳ ತಡೆ ಮತ್ತು ನಿಯಂತ್ರಣದ ರಾಷ್ಟ್ರೀಯ ಕಾರ್ಯಕ್ರಮ’ಕ್ಕೆ (NP-NCD) ಹೆಚ್ಚಿನ ಬಲ ನೀಡಲಿದೆ.

ಗಣ್ಯರ ಉಪಸ್ಥಿತಿ:

ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕ ಡಾ. ಕೆ. ವಸಂತ ಕುಮಾರ್, Resolve to Save Lives (RTSL) ಇಂಡಿಯಾ ನಿರ್ದೇಶಕ ಡಾ. ಸೈಯದ್ ಇಮ್ರಾನ್ ಫರೂಕ್, ಹಿರಿಯ ತಾಂತ್ರಿಕ ಸಲಹೆಗಾರರಾದ ಡಾ. ಮನಿಕಾ ಶರ್ಮಾ, ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಸಮಿತಿ ಸದಸ್ಯ ಡಾ. ಯು.ಎಸ್. ವಿಶಾಲ್ ರಾವ್ ಮತ್ತು ವಿಷನ್ ಫಾರ್ ಸೋಶಿಯಲ್ ಡೆವಲಪ್ಮೆಂಟ್ ಸಂಸ್ಥೆಯ ನಿರ್ದೇಶಕ ಅಮಿತ್ ಕರ್ಣಿಕ್ ಸೇರಿದಂತೆ ಹಲವು ತಜ್ಞರು ಉಪಸ್ಥಿತರಿದ್ದರು.


Share this with Friends

Related Post