ಮೈಸೂರು,ಮೇ.29: ಸಂಸದ ಪ್ರಜ್ವಲ್ ಬಗ್ಗೆ ಮಾತನಾಡಲು ಮಾಜಿ ಸಚಿವ ಸಾ.ರಾ ಮಹೇಶ್, ಶಾಸಕ ಜಿ.ಟಿ ದೇವೇಗೌಡ ಅಂತರ ಕಾಯ್ದುಕೊಂಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಾ.ರಾ ಮಹೇಶ್, ದೇವೇಗೌಡರು ಖಡಕ್ ವಾರ್ನಿಂಗ್ ಕೊಟ್ಟಿದ್ದರು, ಇಷ್ಟರಲ್ಲೇ ಪ್ರಜ್ವಲ್ ವಾಪಸ್ ಬರಬೇಕಿತ್ತು, ಈಗಲಾದರೂ ಬರುತ್ತಿದ್ದಾರೆ ಬರಲಿ ಎಂದು ಹೇಳಿದರು.
ಈ ನೆಲದಲ್ಲಿ ಕಾನೂನಿಗಿಂತ ಯಾರು ದೊಡ್ಡವರಲ್ಲ, ಸತ್ಯಾಸತ್ಯತೆ ಏನು ಎಂಬುದು ಗೊತ್ತಾಗುತ್ತದೆ, ರೇವಣ್ಣ ಬಂಧನ ವಿಚಾರದಲ್ಲಿ ಷಡ್ಯಂತ್ರ ನಡೆದಿದೆ ಎಂದು ನಾನು ಸ್ಪಷ್ಟವಾಗಿ ಹೇಳುತ್ತೇನೆ ಆದರೆ ಪ್ರಜ್ವಲ್ ವಿಚಾರದಲ್ಲಿ ಮಾತನಾಡಲು ನನಗೆ ಮನಸ್ಸು ಒಪ್ಪುತ್ತಿಲ್ಲ ಅವರು ಬರಲಿ ನೋಡೊಣ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳಿದರು.
ರೇವಣ್ಣ ಬಂಧನ ವೇಳೆ ಎಸ್ಐಟಿ ಅಧಿಕಾರಿಗಳು ಹೇಗೆ ವರ್ತಿಸಿದರು,ಯಾರ ಒತ್ತಡದಲ್ಲಿ ಏನೇನು ಮಾಡಿದರು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಸಾ.ರಾ ಮಹೇಶ್ ಮಾರ್ಮಿಕವಾಗಿ ನುಡಿದರು.
ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಸಾ.ರಾ ಮಹೇಶ್, ಸರ್ಕಾರದಲ್ಲಿ ಏನು ನಡೆಯುತ್ತಿದೆ ಎಂಬುದು ಈಗ ಗೊತ್ತಾಗುತ್ತಿದೆ. ಇದರ ಜವಾಬ್ದಾರಿಯನ್ನ ಸಿಎಂ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಘಟನೆಗೆ ಯಾರು ಹೊಣೆಗಾರರು ಎಂಬುದನ್ನ ಗುರುತಿಸಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಈ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಇದ್ದಂತಹ ವ್ಯವಸ್ಥೆಗಳು ಈಗ ಇಲ್ಲ ಎಂಬುದು ಜಗತ್ ಜಾಹೀರಾಗಿದೆ ಎಂದು ಹೇಳಿದರು.
ಶಾಸಕ ಜಿ.ಟಿ ದೇವೇಗೌಡ ಮಾತನಾಡಿ,
ಪ್ರಜ್ವಲ್ ಗೂ ನಮಗೂ ಸಂಬಂಧ ಇಲ್ಲ, ಪ್ರಜ್ವಲ್ ಅವರನ್ನ ಈಗಾಗಲೇ ಪಕ್ಷದಿಂದ ಉಚ್ಚಾಟಿಸಿದ್ದೇವೆ, ನನಗೆ ಸಂಬಂಧವಿಲ್ಲದ ವಿಚಾರದಲ್ಲಿ ನಾನು ಮಾತನಾಡಲು ಇಷ್ಟಪಡುವುದಿಲ್ಲ ಎಂದು ಏನನ್ನೂ ಹೇಳದೆ ಅಂತರ ಕಾಯ್ದು ಕೊಂಡರು.