ಬೆಂಗಳೂರು: ಕಾಂಗ್ರೆಸ್ ಸರ್ಕಾರ ಟನಲ್ ರಸ್ತೆ ಹೆಸರಿನಲ್ಲಿ ಪ್ರಕೃತಿಯನ್ನು ನಾಶಪಡಿಸಿ, ಕೆರೆಗಳನ್ನು ಹಾಳುಮಾಡಿ, ಅವೈಜ್ಞಾನಿಕ ಮೇಲುಸೇತುವೆಗಳನ್ನು ನಿರ್ಮಿಸಿ, ಸ್ಯಾಂಕಿ ಕೆರೆಯ ನಾಶಕ್ಕೆ ಮುಂದಾಗಿದೆ ಎಂದು ಆರೋಪಿಸಿರುವ ಬಿಜೆಪಿ ಸ್ಯಾಂಕಿ ಕೆರೆ ಸಂರಕ್ಷಿಸಿ ಎನ್ನುವ ಶೀರ್ಷಿಕೆಯಡಿ ಸಹಿ ಸಂಗ್ರಹ ಅಭಿಯಾನ ಆರಂಭಿಸಿದೆ.
ಮಲ್ಲೇಶ್ವರದ 18ನೇ ಕ್ರಾಸ್ ಬಳಿ ಇರುವ ಸ್ಯಾಂಕಿ ಕೆರೆಯ ಮುಖ್ಯದ್ವಾರದ ಬಳಿ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು.ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಮಾಜಿ ಉಪಮುಖ್ಯಮಂತ್ರಿ ಮತ್ತು ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ್, ಮಾಜಿ ಸಚಿವ ಮತ್ತು ಶಾಸಕ ಗೋಪಾಲಯ್ಯ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ ಮತ್ತು ಪ್ರಮುಖರು ಸಹಿ ಮಾಡುವ ಮೂಲಕ ಅಭಿಯಾನದಲ್ಲಿ ಪಾಲ್ಗೊಂಡರು.
ಈ ವೇಳೆ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ,ಬೆಂಗಳೂರಿಗೆ ಅಭಿವೃದ್ಧಿ ಕೆಲಸಗಳು ಬೇಕು ಎನ್ನುವುದು ನಿಜ; ಆದರೆ, ನಮ್ಮ ಪರಿಸರ ಮತ್ತು ಜನರ ಜೀವದ ಜೊತೆ ಚೆಲ್ಲಾಟ ಬೇಡ,ಸುರಂಗ ರಸ್ತೆಯ ಡಿಪಿಆರ್ ಅವೈಜ್ಞಾನಿಕ ಎಂದು ಟೀಕಿಸಿದರು.
ಬೆಂಗಳೂರಿಗೆ ಸರಿಹೊಂದುವ ಡಿಪಿಆರ್ ಮಾಡಬೇಕು. ಇಲ್ಲಿ ಪರಿಸರವೇ ನಮಗೆ ಮುಖ್ಯ. ಬೆಂಗಳೂರನ್ನು ಉದ್ಯಾನಗಳ ನಗರ, ಕೆರೆಗಳ ನಗರ ಎಂದು ಕರೆಯಲಾಗುತ್ತಿತ್ತು. ಇವತ್ತು ರಾಜ್ಯ ಸರಕಾರವು ಕಮಿಷನ್ ಹೊಡೆಯಲು, ದುಡ್ಡು ಮಾಡಲೆಂದು ಅವೈಜ್ಞಾನಿಕ ಡಿಪಿಆರ್ ತಯಾರಿಸಿದೆ. ಇದನ್ನು ವಿರೋಧಿಸುತ್ತೇವೆ ಎಂದು ಹೇಳಿದರು.
ಸ್ಯಾಂಕಿ ಟ್ಯಾಂಕ್, ಲಾಲ್ಬಾಗ್, ಕಬ್ಬನ್ ಪಾರ್ಕ್ ಹಾಳು ಮಾಡಲು, ಕೆರೆಗಳನ್ನು ಮುಳುಗಿಸಲು ನೀವು ಹೊರಟಿದ್ದೀರಿ. ಈಗಾಗಲೇ ಕೆರೆಗಳನ್ನು ರಿಯಲ್ ಎಸ್ಟೇಟ್ ದಂಧೆಗಳು ಪೂರ್ತಿ ನುಂಗಿ ಹಾಕಿವೆ. ತರಾತುರಿಯಲ್ಲಿ ಡಿಪಿಆರ್ ಮಾಡುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು.
ಯಾವ ತಜ್ಞರು, ಯಾವ್ಯಾವ ತಂಡಗಳಿಂದ ಇದರ ಅಧ್ಯಯನ ಆಗಿದೆ ಎಂದು ಕೇಳಿದರು. ಪರಿಸರದ ಮೇಲಿನ ಹಾನಿಯ ಅಧ್ಯಯನ ಆಗಿದೆಯೇ? ಸಾಂಸ್ಕೃಕ, ಮಾಲಿನ್ಯದ ಮೇಲಿನ ಪ್ರಭಾವದ ಅಧ್ಯಯನ ನಡೆಸಿದ್ದೀರಾ? ಎಂದು ಪ್ರಶ್ನಿಸಿದರು. ಇದ್ಯಾವುದನ್ನೂ ಮಾಡದೇ ತರಾತುರಿಯಲ್ಲಿ ಟೆಂಡರ್ ಕರೆಯಲಾಗುತ್ತಿದೆ ಎಂದು ಆಕ್ಷೇಪಿಸಿದರು.
ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಸುರಂಗ ರಸ್ತೆಯಿಂದ ಪರಿಸರ ಹಾಳಾಗುತ್ತದೆ. ಸುರಂಗ ಮಾಡಿದ ಕಲ್ಲು ಮಣ್ಣನ್ನು ಎಲ್ಲಿ ಹಾಕುತ್ತೀರಿ? ಈಗಾಗಲೇ ಬೆಂಗಳೂರಿನ ಜನರು ತೆರಿಗೆ ಭಾರದೊಂದಿಗೆ ಸಾವು ನೋವಿನ ಜೊತೆ ಬದುಕುತ್ತಿದ್ದಾರೆ. ಚಿತ್ರಹಿಂಸೆ ಅನುಭವಿಸುತ್ತಿದ್ದಾರೆ. ಕಸ, ನೀರು ಸೇರಿ ಎಲ್ಲ ತೆರಿಗೆಗಳನ್ನು ಹೇರಿದ್ದಾರೆ. ಸಾವಿರಾರು ಕೋಟಿ ವೆಚ್ಚದಿಂದ ಬೆಂಗಳೂರಿನ ಸಂಚಾರ ಸುಗಮ ಆಗಲಿದೆಯೇ?ಅದರ ಬದಲು ಬೆಂಗಳೂರಿನಲ್ಲಿ ಮೆಟ್ರೋ ಯೋಜನೆ ಸಾಫಲ್ಯಗೊಂಡಿದೆ. ಸುಮಾರು 60 ಲಕ್ಷಕ್ಕೂ ಹೆಚ್ಚು ಜನರು ಇದರಲ್ಲಿ ಪ್ರಯಾಣ ಮಾಡುತ್ತಾರೆ ಇದನ್ನೇ ವಿಸ್ತರಣೆ ಮಾಡಿ ಎಂದರು.
ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಮಾತನಾಡಿ,ಸುರಂಗ ರಸ್ತೆ ಯೋಜನೆಗೆ ಕಟ್ ಆಂಡ್ ಪೇಸ್ಟ್ ವಿಧಾನದಲ್ಲಿ ಡಿಪಿಆರ್ ತಯಾರಿಸಿದ್ದಾರೆ.ಸರಿಯಾದ ಪರಿಣತಿ, ಪ್ಯಾನೆಲ್ ಕನ್ಸಲ್ಟೆಂಟ್ ಇಲ್ಲದೇ ಸಾರ್ವಜನಿಕರ ಜೊತೆ ಚೆಲ್ಲಾಟ ಮಾಡುತ್ತಿದ್ದಾರೆ ಎಂದು ದೂರಿದರು.

