Mon. Dec 23rd, 2024

ಬಾಬಾ ರಾಮದೇವ್ ಬೇಷರತ್ ಕ್ಷಮೆಯನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್

baba Ramdev
Share this with Friends

ನವದೆಹಲಿ.ಏ.10: ದಾರಿ ತಪ್ಪಿಸುವ ಜಾಹೀರಾತುಗಳ ಪ್ರಸಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಂಜಲಿ ಸಂಸ್ಥಾಪಕ ಆಚಾರ್ಯ ಬಾಲಕೃಷ್ಣ ಮತ್ತು ಯೋಗ ಗುರು ಬಾಬಾ ರಾಮದೇವ್ಅ ವರ ಬೇಷರತ್ ಕ್ಷಮೆಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಸಂಸ್ಥೆಯ ಕ್ರಮಗಳು ‘ಉದ್ದೇಶಪೂರ್ವಕ, ಮತ್ತು ನ್ಯಾಯಲಯದ ಆದೇಶ ಧಿಕ್ಕರಿಸುವ ಪ್ರಯತ್ನ. ಹೀಗಾಗಿ ಅವರು ಸಲ್ಲಿಸಿರುವ ಅಫಿಡವಿಟ್‌ನಿಂದ ನಾವು ಸಮಾಧಾನಗೊಂಡಿಲ್ಲ ಎಂದು ಕೋರ್ಟ್ ಆಕ್ರೋಶ ಹೊರ ಹಾಕಿದೆ.

ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾ. ಹಿಮ ಕೊಹ್ಲಿ ನೇತೃತ್ವದ ದ್ವಿ ಸದಸ್ಯ ಪೀಠ ವಿಚಾರಣೆಯಲ್ಲಿ ಮತ್ತಷ್ಟು ಕಠಿಣವಾಗಿ ಟೀಕಿಸಿತು. ಪತಂಜಲಿ ಸಂಸ್ಥಾಪಕರ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ಜನರು ಜೀವನದಲ್ಲಿ ತಪ್ಪುಗಳನ್ನು ಮಾಡುತ್ತಾರೆ. ಕೆಲವೊಮ್ಮೆ ಅಂತಹ ತಪ್ಪುಗಳಿಂದ ಬೇರೆ ವ್ಯಕ್ತಿಗಳು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ವಕೀಲರಿಗೆ ಛೀಮಾರಿ ಹಾಕಿತು. ನಾವು ಕುರುಡರಲ್ಲ, ಈ ಪ್ರಕರಣದಲ್ಲಿ ನಾವು ಉದಾರವಾಗಿರಲು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿತು.

ಬಳಿಕ ವಕೀಲ ರೋಹಟಗಿ ಅವರು, ಪತಂಜಲಿ ಮತ್ತು ಅದರ ಎಂಡಿ ಆಚಾರ್ಯ ಬಾಲಕೃಷ್ಣ ಅವರು ಸಲ್ಲಿಸಿದ ಎರಡು ಅಫಿಡವಿಟ್‌ಗಳನ್ನು ಮತ್ತು ಬಾಬಾ ರಾಮ್‌ದೇವ್ ಅವರ ಇನ್ನೊಂದು ಅಫಿಡವಿಟ್‌ಗಳನ್ನು ಓದಿದರು. ಈ ಅಫಿಡೆವಿಟ್ ಗೆ ಪ್ರತಿಕ್ರಿಯಿಸಿದ ಪೀಠ, ಕ್ಷಮಾಪಣೆಯು ಕಾಗದದ ಮೇಲಿದೆ, ನಿರ್ಧಾರಗಳು ಅದರ ವಿರುದ್ಧವಾಗಿದೆ. ನಾವು ಇದನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತೇವೆ. ಈ ತಪ್ಪುಗಳು ಉದ್ದೇಶಪೂರ್ವಕ ಉಲ್ಲಂಘನೆ ಎಂದು ನಾವು ಪರಿಗಣಿಸುತ್ತೇವೆ. ಮುಂದೆ ಏನೇ ಆದರೂ ಎದುರಿಸಲು ಸಿದ್ಧರಾಗಿರಿ ಎಚ್ಚರಿಕೆ ನೀಡಿತು.

ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 16 ರಂದು ನಡೆಯಲಿದ್ದು, ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರ ಮುಂದೆ ಹಾಜರಾಗುವಂತೆ ಸುಪ್ರೀಂ ಕೋರ್ಟ್ ಹೇಳಿದೆ.


Share this with Friends

Related Post