Fri. Mar 6th, 2026

ಬಾಕಿ ಬಿಲ್ ನೆಪದಲ್ಲಿ ಸ್ಕ್ಯಾನಿಂಗ್ ಬಂದ್: ಖಾಸಗಿ ಸಂಸ್ಥೆ ವಿರುದ್ಧ ಸಚಿವ ದಿನೇಶ್ ಗುಂಡೂರಾವ್ ಕೆಂಡ

Share this with Friends

ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಟಿ (CT) ಹಾಗೂ ಎಂಆರ್‌ಐ (MRI) ಸ್ಕ್ಯಾನಿಂಗ್ ಸೇವೆಗಳನ್ನು ಸ್ಥಗಿತಗೊಳಿಸಿರುವ ಖಾಸಗಿ ಸಂಸ್ಥೆಯ ನಡೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಜನಸಾಮಾನ್ಯರ ಆರೋಗ್ಯದ ಜೊತೆ ಆಟವಾಡುತ್ತಿರುವ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು” ಎಂದು ಅವರು ಎಚ್ಚರಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಕೃಷ್ಣ ಡಯಾಗ್ನೋಸ್ಟಿಕ್ಸ್’ ಸಂಸ್ಥೆಯು ಬಾಕಿ ಬಿಲ್ ಪಾವತಿಯಾಗಿಲ್ಲ ಎಂಬ ಕಾರಣ ನೀಡಿ ಫೆಬ್ರವರಿ 18 ರಿಂದ ಸೇವೆ ಸ್ಥಗಿತಗೊಳಿಸಿರುವುದು ಅಕ್ಷಮ್ಯ ಎಂದರು.

ಲೂಟಿಗೆ ಬಿದ್ದಿದೆ ಬ್ರೇಕ್:

“ಖಾಸಗಿ ಸಂಸ್ಥೆಯು 2019 ರಿಂದ ಸುಮಾರು ₹143 ಕೋಟಿ ಬಾಕಿ ಪಾವತಿಗೆ ಒತ್ತಾಯಿಸುತ್ತಿದೆ. ಆದರೆ ಸರ್ಕಾರ ಜಾರಿಗೆ ತಂದಿರುವ ಹೊಸ ಆಡಿಟಿಂಗ್ ತಂತ್ರಾಂಶದಲ್ಲಿ ಭಾರಿ ಅಕ್ರಮ ಪತ್ತೆಯಾಗಿದೆ. ಒಂದೇ ಸ್ಕ್ಯಾನಿಂಗ್‌ಗೆ ಹಲವು ಬಾರಿ ಬಿಲ್ ಮಾಡುವುದು ಹಾಗೂ ಅನಗತ್ಯ ಪರೀಕ್ಷೆಗಳ ಮೂಲಕ ಸರ್ಕಾರದ ಹಣ ಲೂಟಿ ಮಾಡುತ್ತಿರುವುದು ಕಂಡುಬಂದಿದೆ. ಈ ಅಕ್ರಮ ಬಿಲ್ಲಿಂಗ್‌ಗೆ ನಾವು ತಡೆ ನೀಡಿದ್ದಕ್ಕೆ ಸಂಸ್ಥೆಯು ಬ್ಲ್ಯಾಕ್‌ಮೇಲ್ ತಂತ್ರ ಅನುಸರಿಸುತ್ತಿದೆ” ಎಂದು ಸಚಿವರು ವಿವರಿಸಿದರು.

ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಉಳಿತಾಯ:

ಹೊಸ ನಿಯಂತ್ರಣ ಕ್ರಮಗಳಿಂದಾಗಿ ಪ್ರತಿ ತಿಂಗಳು ಅನಗತ್ಯವಾಗಿ ಪಾವತಿಯಾಗುತ್ತಿದ್ದ ₹2.5 ರಿಂದ ₹3 ಕೋಟಿ ರೂಪಾಯಿ ಉಳಿತಾಯವಾಗುತ್ತಿದೆ. ನಿಯಮಬಾಹಿರವಾಗಿ ಸಲ್ಲಿಕೆಯಾಗಿರುವ ಬಿಲ್‌ಗಳನ್ನು ಪಾವತಿಸಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ರೋಗಿಗಳಿಗೆ ಪರ್ಯಾಯ ಹಾದಿ:

ಸೇವೆ ಸ್ಥಗಿತಗೊಂಡಿರುವ 13 ಜಿಲ್ಲಾ ಆಸ್ಪತ್ರೆಗಳ ರೋಗಿಗಳಿಗೆ ತೊಂದರೆಯಾಗದಂತೆ ಹತ್ತಿರದ ಮೆಡಿಕಲ್ ಕಾಲೇಜುಗಳು ಅಥವಾ ಇತರ ಖಾಸಗಿ ಆಸ್ಪತ್ರೆಗಳೊಂದಿಗೆ ಮ್ಯಾಪಿಂಗ್ ಮಾಡಲಾಗಿದೆ. ಅಲ್ಲಿ ಆಗುವ ಸ್ಕ್ಯಾನಿಂಗ್ ವೆಚ್ಚವನ್ನು ‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ ಯೋಜನೆಯಡಿ ಸರ್ಕಾರವೇ ಭರಿಸಲಿದ್ದು, ಸಾರ್ವಜನಿಕರು ಯಾವುದೇ ಹಣ ಪಾವತಿಸುವಂತಿಲ್ಲ.

ಸ್ವಂತ ಸ್ಕ್ಯಾನಿಂಗ್ ಕೇಂದ್ರಗಳ ಸ್ಥಾಪನೆ:

“ಪಿಪಿಪಿ ಮಾದರಿಯಲ್ಲಿ ಖಾಸಗಿ ಸಂಸ್ಥೆಗಳ ಮೇಲಿನ ಅವಲಂಬನೆ ಕಡಿಮೆ ಮಾಡಲು ಸರ್ಕಾರ ನಿರ್ಧರಿಸಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಸರ್ಕಾರವೇ ಸ್ವಂತವಾಗಿ ಸಿಟಿ ಮತ್ತು ಎಂಆರ್‌ಐ ಯಂತ್ರಗಳನ್ನು ಅಳವಡಿಸಲಿದೆ” ಎಂದು ಸಚಿವರು ಭರವಸೆ ನೀಡಿದರು

ಲಸಿಕಾ ಅಭಿಯಾನಕ್ಕೆ ಕರೆ: ಇದೇ ವೇಳೆ ಫೆಬ್ರವರಿ 21 ರಂದು ರಾಜ್ಯಾದ್ಯಂತ ನಡೆಯಲಿರುವ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನದ ಬಗ್ಗೆ ಮಾಹಿತಿ ನೀಡಿದ ಸಚಿವರು, 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ಪೋಷಕರಲ್ಲಿ ಮನವಿ ಮಾಡಿದರು

 


Share this with Friends

Related Post