ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ತ್ಯಾಜ್ಯ ನಿರ್ವಹಣೆಯ ಸವಾಲುಗಳು ಹಾಗೂ ಅಪಾರ್ಟ್ಮೆಂಟ್ಗಳಲ್ಲಿ ಹಸಿ ತ್ಯಾಜ್ಯ ವಿಲೇವಾರಿ ಕುರಿತಾದ ಸಮಸ್ಯೆಗಳನ್ನು ಬಗೆಹರಿಸಲು ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮ (KCDCL) ಮಹತ್ವದ ಹೆಜ್ಜೆ ಇಟ್ಟಿದ್ದು,ಅಪಾರ್ಟ್ಮೆಂಟ್ಗಳಲ್ಲಿನ ಕಾಂಪೋಸ್ಟಿಂಗ್ ಸಮಸ್ಯೆಗಳನ್ನು ಬಗೆಹರಿಸಲು ಅಗತ್ಯ ಸಹಕಾರ ನೀಡುವ ಭರವಸೆ ನೀಡಿದೆ.
ಬೆಂಗಳೂರು ಅಪಾರ್ಟ್ಮೆಂಟ್ಸ್ ಫೆಡರೇಶನ್ (BAF) ಮತ್ತು ಬಿ.ಪ್ಯಾಕ್ (B.PAC) ಸಂಸ್ಥೆಯ ಪ್ರಮುಖರು ಕೆಸಿಡಿಸಿಎಲ್ ಕಚೇರಿಗೆ ಭೇಟಿ ನೀಡಿ ನಿಗಮದ ಅಧ್ಯಕ್ಷರನ್ನು ಭೇಟಿಯಾದರು. ತ್ಯಾಜ್ಯ ವಿಲೇವಾರಿಯಲ್ಲಿನ ಸಮಸ್ಯೆಗಳ ಕುರಿತು ಸುದೀರ್ಘ ಸಮಾಲೋಚನೆ ನಡೆಸಿದರು. ನಗರದ ಸ್ವಚ್ಛತೆ ಮತ್ತು ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಹಲವು ನಿರ್ಣಾಯಕ ವಿಷಯಗಳನ್ನು ಚರ್ಚಿಸಲಾಯಿತು.
ಬೆಂಗಳೂರಿನಲ್ಲಿ ಮೂಲದಲ್ಲೇ ತ್ಯಾಜ್ಯ ವಿಂಗಡಣೆ (Waste Segregation) ಮಾಡುವಲ್ಲಿ ಎದುರಾಗುತ್ತಿರುವ ಅಡೆತಡೆಗಳು. ಅಪಾರ್ಟ್ಮೆಂಟ್ ಸಮುಚ್ಚಯಗಳಲ್ಲಿ ಕಾಂಪೋಸ್ಟಿಂಗ್ (ಗೊಬ್ಬರ ತಯಾರಿಕೆ) ಪ್ರಕ್ರಿಯೆಯಲ್ಲಿ ಎದುರಾಗುತ್ತಿರುವ ತಾಂತ್ರಿಕ ಮತ್ತು ಪ್ರಾಯೋಗಿಕ ತೊಂದರೆಗಳು. ತ್ಯಾಜ್ಯವನ್ನು ಕೇವಲ ವಿಲೇವಾರಿ ಮಾಡುವುದಲ್ಲದೆ, ಅದನ್ನು ವೈಜ್ಞಾನಿಕವಾಗಿ ಸಂಸ್ಕರಿಸುವ ಅಗತ್ಯತೆ ಕುರಿತು ಸಮಾಲೋಚನೆ ನಡೆಸಲಾಯಿತು.
ಸಮಸ್ಯೆ ಆಲಿಸಿ ಮಾತನಾಡಿದ ಕೆಸಿಡಿಸಿಎಲ್ ಅಧ್ಯಕ್ಷ ಎ.ಎನ್. ನಟರಾಜ್ ಗೌಡ,”ನಾಗರಿಕರ ಸಹಭಾಗಿತ್ವ ಮತ್ತು ಸಂಘಟಿತ ಪ್ರಯತ್ನವಿದ್ದರೆ ಮಾತ್ರ ನಗರದ ತ್ಯಾಜ್ಯ ಸಮಸ್ಯೆಯನ್ನು ಹೋಗಲಾಡಿಸಲು ಸಾಧ್ಯ. ಅಪಾರ್ಟ್ಮೆಂಟ್ಗಳಲ್ಲಿನ ಕಾಂಪೋಸ್ಟಿಂಗ್ ಸಮಸ್ಯೆಗಳನ್ನು ಬಗೆಹರಿಸಲು ಕೆಸಿಡಿಸಿಎಲ್ ಸಂಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.”
ಈ ಮಹತ್ವದ ಸಭೆಯಲ್ಲಿ ಬೆಂಗಳೂರು ಅಪಾರ್ಟ್ಮೆಂಟ್ಸ್ ಫೆಡರೇಶನ್ (BAF) ಪರವಾಗಿ ಮುಖ್ಯಸ್ಥ ಸತೀಶ್ ಮಲ್ಯ, ಖಜಾಂಚಿ ಕಿರಣ್ ಹೆಬ್ಬಾರ್, ಕಾರ್ಯದರ್ಶಿ ಕೆ. ಅರುಣ್ ಕುಮಾರ್ ಹಾಗೂ ಬಿ.ಪ್ಯಾಕ್ (B.PAC) ನ ಮುಖ್ಯ ಸಂಯೋಜಕ ರಾಘವೇಂದ್ರ ಅವರು ಉಪಸ್ಥಿತರಿದ್ದು, ತಮ್ಮ ಸಲಹೆಗಳನ್ನು ಹಂಚಿಕೊಂಡರು.

