Fri. Mar 6th, 2026

ದ್ವಿತೀಯ ಪಿಯು ಪ್ರಶ್ನೆಪತ್ರಿಕೆ ಸೋರಿಕೆ ವದಂತಿ: ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ

Share this with Friends

ಬೆಂಗಳೂರು: ರಾಜ್ಯದಲ್ಲಿ ಶೀಘ್ರದಲ್ಲೇ ಆರಂಭವಾಗಲಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಮಾರಾಟವಾಗುತ್ತಿವೆ ಎಂಬ ಸುದ್ದಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು (KSEAB) ಬಲವಾಗಿ ಅಲ್ಲಗಳೆದಿದೆ. ಇದು ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವ ಉದ್ದೇಶಪೂರ್ವಕ ಸಂಚಾಗಿದ್ದು, ಸಾರ್ವಜನಿಕರು ಇಂತಹ ವದಂತಿಗಳಿಗೆ ಕಿವಿಗೊಡಬಾರದು ಎಂದು ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ವದಂತಿಗಳಿಗೆ ಆಸ್ಪದವಿಲ್ಲ:

ಕಳೆದ ಕೆಲವು ದಿನಗಳಿಂದ ವಾಟ್ಸಾಪ್ ಮತ್ತು ಟೆಲಿಗ್ರಾಂನಂತಹ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಸುಳ್ಳು ಮಾಹಿತಿಯನ್ನು ಹರಡಲಾಗುತ್ತಿದೆ. ಮಂಡಳಿಯು ಈ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಿದ್ದು, ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದಕ್ಕೆ ಯಾವುದೇ ಪೂರಕ ಪುರಾವೆಗಳು ಲಭ್ಯವಾಗಿಲ್ಲ. ಪರೀಕ್ಷಾ ಪೂರ್ವದಲ್ಲಿ ಆತಂಕ ಸೃಷ್ಟಿಸುವ ಇಂತಹ ಪ್ರಯತ್ನಗಳ ವಿರುದ್ಧ ಸೈಬರ್ ಪೊಲೀಸ್ ನೆರವಿನೊಂದಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಂಡಳಿ ಎಚ್ಚರಿಸಿದೆ.

ಅಧಿಕೃತ ಜಾಲತಾಣ ಬಳಸಿ:

ವಿದ್ಯಾರ್ಥಿಗಳ ಪರೀಕ್ಷಾ ಸಿದ್ಧತೆಗಾಗಿ ಮಂಡಳಿಯ ಅಧಿಕೃತ ಜಾಲತಾಣವಾದ kseab.karnataka.gov.in ನಲ್ಲಿ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಒದಗಿಸಲಾಗಿದೆ. ವಿದ್ಯಾರ್ಥಿಗಳು ಇವುಗಳನ್ನು ಸದುಪಯೋಗಪಡಿಸಿಕೊಳ್ಳಲು ಸೂಚಿಸಲಾಗಿದೆ:

ಬ್ಲೂಪ್ರಿಂಟ್: ವಿಷಯವಾರು ಅಂಕಗಳ ಹಂಚಿಕೆಯ ಮಾಹಿತಿ.

ಪ್ರಶ್ನೆ ಕೋಠಿ: ಸುಮಾರು ಶೇ. 70 ರಿಂದ 75 ರಷ್ಟು ಪ್ರಶ್ನೆಗಳು ಈ ಸಂಗ್ರಹದಿಂದಲೇ ಬರುವ ಸಾಧ್ಯತೆಯಿದೆ.

ಮಾದರಿ ಪತ್ರಿಕೆಗಳು: ಪರೀಕ್ಷಾ ಮಾದರಿಯನ್ನು ಅರ್ಥೈಸಿಕೊಳ್ಳಲು ಮಾದರಿ ಪ್ರಶ್ನೆ ಪತ್ರಿಕೆ ಮತ್ತು ಉತ್ತರಗಳು ಲಭ್ಯ.

ಸಾಧಕರ ಉತ್ತರ ಪತ್ರಿಕೆ: ಹಿಂದಿನ ವರ್ಷದ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಸಹ ಒದಗಿಸಲಾಗಿದೆ.

ಪೋಷಕರು ಮತ್ತು ವಿದ್ಯಾರ್ಥಿಗಳು ಯಾವುದೇ ಅಕ್ರಮ ಆಮಿಷಗಳಿಗೆ ಒಳಗಾಗದೆ, ಏಕಾಗ್ರತೆಯಿಂದ ಪರೀಕ್ಷೆಗೆ ಸಿದ್ಧರಾಗಬೇಕು ಎಂದು ಮಂಡಳಿಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

 


Share this with Friends

Related Post