ಹಾವೇರಿ(ಶಿಗ್ಗಾವಿ): ಶಿಗ್ಗಾವಿ ಸವಣೂರು ಕ್ಷೇತ್ರದ ಜನರ ಸಂಬಂಧಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ,ಜೀವನದ ಕೊನೆವರೆಗೂ ಪ್ರಾಮಾಣಿಕವಾಗಿ ಶಿಗ್ಗಾವಿ ಸವಣೂರು ಕ್ಷೇತ್ರದ ಜನರ ಸೇವೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಭಾವನಾತ್ಮಕವಾಗಿ ನುಡಿದರು.
ಇಂದು ಶಿಗ್ಗಾಂವ ನಗರದ ಸವಣೂರ ರಸ್ತೆಯಲ್ಲಿರುವ ಬಸವರಾಜ ಬೊಮ್ಮಾಯಿರವರ ಮನೆಯ ಸಭಾಭವನದಲ್ಲಿ ತಮ್ಮ 66 ನೇಯ ಜನ್ಮದಿನೋತ್ಸವದ ಅಂಗವಾಗಿ ಪೌರ ಕಾರ್ಮಿಕರಿಗೆ ಏರ್ಪಡಿಸಲಾದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ, ಮಾತನಾಡಿದ ಅವರು,ಶಿಗ್ಗಾವಿ ಸವಣೂರು ಕ್ಷೇತ್ರದ ಜನರು ನೀಡಿರುವ ಪ್ರೀತಿ, ವಿಶ್ವಾಸ ಜನಪ್ರತಿನಿಧಿ ಮತ್ತು ಜನರ ನಡುವಿನ ಸಂಬಂಧವಲ್ಲ ಅದನ್ನು ಮೀರಿದ ಸಂಬಂಧ. ಈ ಸಂಬಂಧಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಈ ಸಂಬಂಧ ಶಾಶ್ವತವಾಗಿ ಉಳಿಸಿಕೊಂಡು ಹೋಗುವುದು ನನ್ನ ಕರ್ತವ್ಯ ನಾನು ಈ ಕ್ಷೇತ್ರದ ಜನರ ಋಣದಲ್ಲಿದ್ದೇನೆ. ಜೀವನದ ಕೊನೆವರೆಗೂ ನನ್ನ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದರು.
ಒಳ್ಳೆಯ ಉದ್ದೇಶಕ್ಕೆ ನಿರಂತರ ಶ್ರಮ ವಹಿಸಬೇಕು. ಕಾಯಕದಿಂದಲೇ ನಾವು ಯಶಸ್ವಿಯಾಗಲು ಸಾಧ್ಯ ದುಡಿಮೆಯೇ ದೇವರು, ದುಡಿಮೆ ಇಲ್ಲದಿದ್ದರೆ ಯಾರು ಎಷ್ಟೇ ಶ್ರೀಮಂತ ಇದ್ದರೂ ಉಳಿಯುವುದಿಲ್ಲ. ನನ್ನ ಜೀವನದ ಕೊನೆ ಉಸಿರಿರುವವರೆಗೂ ಸಾರ್ವಜನಿಕ ಸೇವೆ ಮಾಡುತ್ತೇನೆ. ಶಿಗ್ಗಾವಿ ಸವಣೂರು ಕ್ಷೇತ್ರದ ಜನತೆಯ ಸೇವೆಯನ್ನು ಮಾಡುತ್ತೇನೆ. ನಿಮ್ಮ ಒಡನಾಟ, ಪ್ರೀತಿ ವಿಶ್ವಾಸ, ನೀವು ಕೊಡುವ ಚಾ, ಉಪ್ಪಿಟ್ಟು, ಎಲ್ಲವೂ ನೆನಪಿದೆ. ಇದು ಜನಪ್ರತಿನಿಧಿ ಜನರ ನಡುವಿನ ಸಂಬಂಧವಲ್ಲ, ಅದನ್ನು ಮೀರಿದ ಸಂಬಂಧ, ಈ ಸಂಬಂಧಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಈ ಸಂಬಂಧ ಶಾಶ್ವತವಾಗಿ ಉಳಿಸಿಕೊಂಡು ಹೋಗುವುದು ನನ್ನ ಕರ್ತವ್ಯ ಜನರ ವಿಶ್ವಾಸ ಮತ್ತು ಪ್ರೀತಿ ಗಳಿಸುವುದು ಮುಖ್ಯ ಅದು ಶಾಶ್ವತ ಎಂದು ಹೇಳಿದರು.
ನನ್ನ ಪುಣ್ಯ:
ನರೇಂದ್ರ ಮೋದಿಯವರು ಪ್ರಧಾನಿಯಾಗಿರುವ ಕಾಲದಲ್ಲಿ ನಾನು ಎಂಪಿ ಆಗಿದು ನನ್ನ ಪುಣ್ಯ ಎಂದು ಭಾವಿಸಿದ್ದೇನೆ. ಅವರು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ. 24 ಗಂಟೆಯೂ ದೇಶದ ಅಭಿವೃದ್ಧಿ ಬಗ್ಗೆ. ಚಿಂತನೆ ಮಾಡುತ್ತಾರೆ. ನಿನ್ನೆ ಯುರೋಪ್ ಒಕ್ಕೂಟದ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಅದರಿಂದ ನಮ್ಮ ದೇಶದ ಆದಾಯ ಎರಡು ಪಟ್ಟು ಹೆಚ್ಚಾಗಲಿದೆ. ಇಪತ್ತು ವರ್ಷದಿಂದ ಪಯತ್ನ ನಡೆಸಿದ್ದರು ಆಗಿರಲಿಲ್ಲ. ಆದರೆ, ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ಅದು ಯಶಸ್ವಿಯಾಗಿದೆ. ಕೊವಿಡ್ ಆದ ಮೇಲೆ ಜಗತ್ತಿನ ಇತರ ದೇಶಗಳು ಚೇತರಿಸಿಕೊಂಡಿಲ್ಲ. ಆದರೆ ಭಾರತ ಆರ್ಥಿಕವಾಗಿ ಮುನ್ನಡೆಯುತ್ತಿದೆ. 25 ಕೋಟಿ ಜನ ಬಡತನದಿಂದ ಮುಕ್ತವಾಗಿದ್ದಾರೆ. ನಾನು ಸಿಎಂ ಆದ ನಂತರ ಈ ರಾಜ್ಯದ ಬಜೆಟ್ಟನ್ನು ಉಳಿತಾಯ ಬಜೆಟ್ ಮಾಡಿದ್ದೇನೆ. ನಾನಿದ್ದಾಗ ಸಾಲ ತೆಗೆದುಕೊಂಡಿದ್ದು ಒಂದು ಬಾರಿ 57 ಸಾವಿರ ಕೋಟಿ, ಒಂದು ವರ್ಷ 53 ಸಾವಿರ ಕೋಟಿ, ಆದರೆ, ಸಿದ್ದರಾಮಯ್ಯ ಸರ್ಕಾರ 1.35 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಅದರಿಂದ ಯಾವ ಕೆಲಸ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಹೆಚ್ಚಿನ ಬಡ್ಡಿಯಿಂದ ಸಾಲ ಪಡೆಯುತ್ತಿದ್ದಾರೆ. ಇವರು ಸಾಲ ಮಾಡಿ ಹೋಗುತ್ತಾರೆ. ಮುಂದೆ ಬಂದವರು ಅದನ್ನು ತೀರಿಸಬೇಕಾಗುತ್ತದೆ. ನಾನು ಸಿಎಂ ಇದ್ದಾಗ ಸಿದ್ಧರಾಮಯ್ಯ ಅವರು 2013 ರಲ್ಲಿ ಮಾಡಿದ ಸಾಲ ತೀರಿಸಿದ್ದೇನೆ. ಇವರು ಈ ರಾಜ್ಯವನ್ನು ಮತ್ತೊಮ್ಮೆ ಆರ್ಥಿಕ ಸುಸ್ಥಿಗೆ ತಂದು ರಾಜ್ಯವನ್ನು ಅಭಿವೃದ್ಧಿ ಮಾಡಬೇಕಿದೆ. ಇಲ್ಲದಿದ್ದರೆ ಪ್ರತಿಯೊಬ್ಬರ ತಲೆಯ ಮೇಲೆ 2 ಲಕ್ಷ ರೂ. ಸಾಲ ಹೊರಿಸಬೇಕಾಗುತ್ತದೆ ಎಂದು ಹೇಳಿದರು.

