ಚಿತ್ರದುರ್ಗ:ದೇಶದಲ್ಲಿಯೇ ಶಿಕ್ಷಣಕ್ಕೆ ದಾವಣಗೆರೆ ಹೆಸರುವಾಸಿಯಾಗಿದ್ದು ಶಾಮನೂರು ಶಿವಶಂಕರಪ್ಪ ಅವರಿಂದ ಎನ್ನುವುದು ನಿರ್ವಿವಾದದ ಸಂಗತಿ,ಶಿಕ್ಷಣ ಮತ್ತು ಸಮಾಜಸೇವೆಯಲ್ಲಿ ಅವರ ಹೆಸರು ಅಜರಾಮರ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿಂದು ಹಿರಿಯ ರಾಜಕೀಯ ಮುತ್ಸದ್ದಿ ಶಾಮನೂರು ಶಿವಶಂಕರಪ್ಪ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಈ ಭಾಗದಲ್ಲಿ ಶಾಮನೂರು ಶಿವಶಂಕರಪ್ಪ ಒಬ್ಬ ವ್ಯಕ್ತಿ ಆಗಿರದೇ ಒಂದು ಸಂಸ್ಥೆಯಂತೆ ಕೆಲಸ ಮಾಡಿದ್ದಾರೆ. ವಾಣಿಜ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿನ ಅವರ ಕೆಲಸ ಸ್ಮರಣೀಯವಾದದ್ದು. ದಾವಣಗೆರೆ ಜಿಲ್ಲೆಗೆ ದೇಶದ ಎಲ್ಲ ಭಾಗಗಳಿಂದ ವಿದ್ಯಾರ್ಥಿಗಳು ಬಂದು,ದೇಶದಲ್ಲಿಯೇ ಶಿಕ್ಷಣಕ್ಕೆ ದಾವಣಗೆರೆ ಹೆಸರುವಾಸಿಯಾಗಿದ್ದು ಶಾಮನೂರು ಶಿವಶಂಕರಪ್ಪ ಅವರಿಂದ ಎನ್ನುವುದು ನಿರ್ವಿವಾದದ ಸಂಗತಿ ಎಂದರು.
ಪುರಸಭೆಯಿಂದ ಸಂಸತ್ತಿನವರೆಗಿನ ಅವರ ಪಯಣ ರೋಚಕವಾದದ್ದು. ಬದುಕನ್ನು ಹೇಗೆ ಆನಂದಿಸಬೇಕು ಎನ್ನುವುದನ್ನು ಅವರನ್ನು ನೋಡಿ ಕಲಿಯಬೇಕು. ಸದಾ ಲವಲವಿಕೆಯಿಂದ ಇರುತ್ತಿದ್ದ ಶಾಮನೂರು ಶಿವಶಂಕರಪ್ಪನವರು ಸಾಧನೆಯ ಮೂಲಕ ತಮ್ಮ ಹೆಸರನ್ನು ಶಾಶ್ವತವಾಗಿರುವಂತೆ ಮಾಡಿದ್ದಾರೆ ಎಂದರು.
ಶಾಮನೂರು ಅವರು ಆತಿಥ್ಯಕ್ಕೆ ಹೆಸರುವಾಸಿ. ಪಕ್ಷಾತೀತವಾಗಿ ಪ್ರೀತಿಯಿಂದ ಎಲ್ಲರನ್ನೂ ಪ್ರೀತಿಸುತ್ತಿದ್ದ ಅವರು, ದಾವಣಗೆರೆಯನ್ನು ಶಾಂತಿ, ಸಹಬಾಳ್ವೆಯ ಮಂತ್ರದ ಮೂಲಕ ಕಟ್ಟಿಬೆಳೆಸಿದ್ದು ಎಲ್ಲರಿಗೂ ಮಾದರಿ,ಅವರು ಅನಕರಣೀಯರು ಎಂದು ಹೇಳಿದರು.

