Fri. Mar 6th, 2026

ಶಿರಹಟ್ಟಿ ಬಿಜೆಪಿ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ: ಬಿಜೆಪಿ ನಾಯಕರ ಪ್ರತಿಕ್ರಿಯೆ

Share this with Friends

ಗದಗ: ಗುತ್ತಿಗೆದಾರರಿಂದ ಲಂಚ ಸ್ವೀಕರಿಸುವ ವೇಳೆ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಈ ಕುರಿತು  ಬಿಜೆಪಿಯ ಪ್ರಮುಖ ನಾಯಕರು  ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು,ಸತ್ಯಾಸತ್ಯತೆಯ ಪರಿಶೀಲನೆಯ ನಂತರ ಪಕ್ಷವು ತನ್ನ ನಿಲುವು ಪ್ರಕಟಿಸಲಿದೆ ಎನ್ನುವ ನಿಲುವು ವ್ಯಕ್ತಪಡಿಸಿದ್ದಾರೆ.

ಶಾಸಕರ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸದ್ಯಕ್ಕೆ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದಾರೆ. ಘಟನೆಯ ಸಂಪೂರ್ಣ ವಿವರಗಳನ್ನು ಪಡೆದುಕೊಂಡ ನಂತರವಷ್ಟೇ ತಾವು ಅಧಿಕೃತವಾಗಿ ಮಾತನಾಡಲು ಸಾಧ್ಯ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ.

ಪ್ರಲ್ಹಾದ್ ಜೋಶಿ ನಿಲುವು:

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, “ಕಾನೂನು ಎಲ್ಲರಿಗೂ ಒಂದೇ, ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಿ” ಎಂಬ ನಿಲುವನ್ನು ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ ಮತ್ತು ಈ ಪ್ರಕ್ರಿಯೆಯಲ್ಲಿ ಪಕ್ಷವು ಹಸ್ತಕ್ಷೇಪ ಮಾಡುವುದಿಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ.

ಛಲವಾದಿ ನಾರಾಯಣಸ್ವಾಮಿ:

ಪಕ್ಷವು ಭ್ರಷ್ಟಾಚಾರವನ್ನು ಬೆಂಬಲಿಸುವುದಿಲ್ಲ ಎಂದು ಪುನರುಚ್ಚರಿಸಿರುವ ಛಲವಾದಿ ನಾರಾಯಣಸ್ವಾಮಿ ಅವರು, ಘಟನೆಯ ಪೂರ್ಣ ವಿವರಗಳು ತಮಗೆ ಇನ್ನೂ ಲಭ್ಯವಾಗಿಲ್ಲ ಎಂದಿದ್ದಾರೆ. ಲಂಚದಂತಹ ಚಟುವಟಿಕೆಗಳಲ್ಲಿ ಯಾರೇ ಭಾಗಿಯಾಗಿದ್ದರೂ ಅದನ್ನು ಪಕ್ಷವು ಒಪ್ಪುವುದಿಲ್ಲ ಮತ್ತು ವರದಿ ಬಂದ ನಂತರ ಮುಂದಿನ ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದ್ದಾರೆ.

ಒಟ್ಟಾರೆ ಬಿಜೆಪಿಯ ಬಹುತೇಕ ನಾಯಕರು ಈ ಪ್ರಕರಣದಲ್ಲಿ ರಕ್ಷಣಾತ್ಮಕ ನಿಲುವು ತಳೆದಿದ್ದು, ತನಿಖೆಗೆ ಮುಕ್ತ ಅವಕಾಶ ನೀಡುವ ಹಾಗೂ ವರದಿಗಾಗಿ ಕಾಯುವ ಮಾತನಾಡಿದ್ದಾರೆ. ಆದರೂ ಈ ಬೆಳವಣಿಗೆಯಿಂದ ಬಿಜೆಪಿ ತೀವ್ರ ಮುಜುಗರಕ್ಕೀಡಾಗಿದ್ದು, ಮುಂಬರುವ ದಿನಗಳಲ್ಲಿ ಪಕ್ಷವು ಶಾಸಕರ ವಿರುದ್ಧ ಯಾವ ರೀತಿಯ ಶಿಸ್ತು ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.


Share this with Friends

Related Post