Fri. Mar 6th, 2026

ಶಿವಾಜಿ ಮಹಾರಾಜರು ಒಂದು ಧರ್ಮಕ್ಕೆ ಸೀಮಿತವಲ್ಲ: ಸಚಿವ ಶಿವರಾಜ್ ತಂಗಡಗಿ

Share this with Friends

ಬೆಂಗಳೂರು: “ಛತ್ರಪತಿ ಶಿವಾಜಿ ಮಹಾರಾಜರು ಕೇವಲ ಒಂದು ಧರ್ಮಕ್ಕೆ ಸೀಮಿತವಾದವರಲ್ಲ, ಅವರ ಹೆಸರಿನಲ್ಲಿ ರಾಜಕಾರಣ ಮಾಡುವುದು ಅಥವಾ ಅವರನ್ನು ಕೇಸರಿಕರಣಗೊಳಿಸುವುದು ಸರಿಯಲ್ಲ” ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್. ತಂಗಡಗಿ ಆತಂಕ ವ್ಯಕ್ತಪಡಿಸಿದರು.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಿವಾಜಿ ಮಹಾರಾಜರ ಆಡಳಿತ ಮಾದರಿಯು ಸರ್ವಧರ್ಮ ಸಹಿಷ್ಣುತೆಗೆ ಸಾಕ್ಷಿಯಾಗಿತ್ತು. ಅವರ ಕಾಲದಲ್ಲಿ ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯವಿತ್ತು ಮತ್ತು ಎಲ್ಲಾ ಸಮುದಾಯದವರನ್ನು ಆಡಳಿತದಲ್ಲಿ ತೊಡಗಿಸಿಕೊಂಡಿದ್ದರು ಎಂದು ನೆನಪಿಸಿದರು.

ಕನ್ನಡದ ಮೇಲೆ ಅಪಾರ ಪ್ರೇಮ:

ಶಿವಾಜಿ ಮಹಾರಾಜರು ಕರ್ನಾಟಕದ ನೆಲ ಮತ್ತು ಭಾಷೆಯ ಮೇಲೆ ವಿಶೇಷ ಗೌರವ ಹೊಂದಿದ್ದರು. ವಿಜಯನಗರ ಸಾಮ್ರಾಜ್ಯದ ಪತನದ ಅವಶೇಷಗಳನ್ನು ಕಂಡು ಭಾವುಕರಾಗಿದ್ದ ಅವರು, ಔರಂಗಜೇಬನ ವಿರುದ್ಧ ಕಿಡಿಕಾರಿದ್ದರು. ಅವರ ನಿಜವಾದ ಇತಿಹಾಸವನ್ನು ಇಂದಿನ ಪೀಳಿಗೆ ಸರಿಯಾಗಿ ತಿಳಿದುಕೊಳ್ಳಬೇಕು ಎಂದು ಸಚಿವರು ಕರೆ ನೀಡಿದರು.

ಸಂಭಾಜಿ ಸಮಾಧಿ ಅಭಿವೃದ್ಧಿ:

ತಮ್ಮ ಕ್ಷೇತ್ರವಾದ ಕನಕಗಿರಿಯಲ್ಲಿ ಶಿವಾಜಿ ಪುತ್ರ ಸಾಂಬಾಜಿ ಅವರ ಸಮಾಧಿ ಇರುವುದು ಗಮನಕ್ಕೆ ಬಂದಿದೆ. ಪ್ರಸ್ತುತ ಅದು ಖಾಸಗಿ ಸ್ಥಳದಲ್ಲಿದ್ದು, ಕಾನೂನು ತೊಡಕುಗಳನ್ನು ನಿವಾರಿಸಿ ಸಮಾಧಿಯನ್ನು ಅಭಿವೃದ್ಧಿಪಡಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಚಿವರು ಭರವಸೆ ನೀಡಿದರು.

ಮೀಸಲಾತಿ ಸ್ಮರಣೆ:

ದೇಶದಲ್ಲಿ ಮೊದಲ ಬಾರಿಗೆ ಮೀಸಲಾತಿ ಜಾರಿಗೆ ತಂದ ಸಾಹು ಮಹಾರಾಜರ ಕೊಡುಗೆಯನ್ನು ಸ್ಮರಿಸಿದ ಅವರು, ಬಡ ವಿದ್ಯಾರ್ಥಿಗಳ ವಿದೇಶಿ ವ್ಯಾಸಂಗದ ಧನಸಹಾಯವನ್ನು 25 ಲಕ್ಷದಿಂದ 50 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

ವಿತರಣೆ: ಇದೇ ವೇಳೆ ಮರಾಠ ಅಭಿವೃದ್ಧಿ ನಿಗಮದ ವತಿಯಿಂದ ವಿವಿಧ ಯೋಜನೆಗಳ ಪ್ರಮಾಣ ಪತ್ರವನ್ನು ಸಚಿವರು ವಿತರಿಸಿದರು.

 


Share this with Friends

Related Post