ಬೆಂಗಳೂರು, ಫೆ.21: ಖಾಸಗಿ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯವಲ್ಲ ಎಂಬರ್ಥದ ಸುತ್ತೋಲೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಸ್ಪಷ್ಟನೆ ನೀಡಿದ್ದಾರೆ.
ವಸತಿ ಶಾಲೆಗಳಲ್ಲಿ ಧಾರ್ಮಿಕ ಹಬ್ಬಗಳ ಆಚರಣೆಗೆ ನಿರ್ಬಂಧ ಹೇರಿ ಆಮೇಲೆ ಹಿಂಪಡೆದಿದ್ದ ಮತ್ತು ಶಾಲೆಗಳ ಪ್ರವೇಶ ದ್ವಾರದಲ್ಲಿ ಕುವೆಂಪು ಕವಿತೆಯ ಬರಹದ ಸಾಲುಗಳನ್ನು ತೆಗೆಸಿ ಆಮೇಲೆ ಯೂಟರ್ನ್ ತೆಗೆದುಕೊಂಡಿದ್ದ ರಾಜ್ಯ ಸರ್ಕಾರಇದೀಗ ಮತ್ತೊಂದು ಅಂಥದ್ದೇ ಕ್ರಮಕ್ಕೆ ಮುಂದಾಗಿದೆ. ಖಾಸಗಿ ಶಾಲೆಗಳಲ್ಲಿ ಇನ್ನು ಮುಂದೆ ನಾಡಗೀತೆ ಹಾಡುವುದು ಕಡ್ಡಾಯವಲ್ಲ ಎಂಬರ್ಥದ ಸುತ್ತೋಲೆಯನ್ನು ರಾಜ್ಯ ಸರ್ಕಾರ ಫೆಬ್ರವರಿ 16ರಂದು ಹೊರಡಿಸಿತ್ತು.
ಈ ಸುತ್ತೋಲೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಸ್ಪಷ್ಟನೆ ನೀಡಿದ್ದಾರೆ. ಒಂದು ಸಣ್ಣ ಪ್ರಿಂಟ್ ಸಮಸ್ಯೆ ಆಗಿದೆ. ನಮ್ಮಗೆ ಎಲ್ಲಾ ಶಾಲೆಗಳು ಒಂದೆ. ಆದೇಶ ಮಾಡಬೇಕಾದರೆ ಸರ್ಕಾರಿ ಶಾಲೆ ಅನುದಾನಿತ ಶಾಲೆ ಅಂತ ಪ್ರಿಂಟ್ ಮಿಸ್ಟೇಕ್ ಆಗಿದೆ. ಅದು ಎಲ್ಲ ಶಾಲೆಗಳು ಅಂತ ತಿದ್ದುಪಡಿ ಮಾಡಿಸುತ್ತೇವೆ. ನಮ್ಮ ಸರ್ಕಾರಕ್ಕೆ ಕನ್ನಡ ಬಗ್ಗೆ ಕಾಳಜಿ ಇದೆ. ನಾವು ಬಹಳ ಸ್ಪಷ್ಟವಾಗಿ ಇದ್ದೇವೆ. ಆದೇಶ ಪ್ರತಿಯ ಸಾಧಕ-ಭಾದಕ ಹೇಳಬೇಕು. ಸಹಜವಾಗಿ ನೋಟ್ ಶೀಟ್ ಒಳಗಡೆ ಸಣ್ಣಪುಟ್ಟ ಸಮಸ್ಯೆ ಆಗಿದೆ ಎಂದು ಹೇಳಿದರು.
ಸುತ್ತೋಲೆಯಲ್ಲಿ ಏನಿತ್ತು..?
ರಾಷ್ಟ್ರ ಕವಿ, ಜ್ಞಾನಪೀಠ ಪುರಸ್ಕೃತ ಡಾ. ಕುವೆಂಪುರವರ ‘ಜಯ ಭಾರತ ಜನನಿಯ ತನುಜಾತೆ’ ಕವನವನ್ನು ‘ನಾಡಗೀತೆ’ಯಾಗಿ ಘೋಷಿಸುವ ಕುರಿತು ಹೊರಡಿಸಲಾದ ಸರ್ಕಾರದ ಆದೇಶ ಹಾಗೂ ಅದಕ್ಕೆ ಫೆಬ್ರವರಿ 1ರಂದು ಮಾಡಲಾದ ತಿದ್ದುಪಡಿ ಪ್ರಕಾರ, ‘ಎಲ್ಲಾ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರದ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪ್ರಾಧಿಕಾರ ಮುಂತಾದ ಅರೆ ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಪ್ರಾರಂಭದಲ್ಲಿ ಹಾಡುವುದು’ ಎಂಬುದರ ಬದಲಾಗಿ, ‘ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರದ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪ್ರಾಧಿಕಾರ ಮುಂತಾದ ಅರೆ ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಪ್ರಾರಂಭದಲ್ಲಿ ಹಾಡುವುದು’ ಎಂದು ತಿದ್ದಿ ಓದಿಕೊಳ್ಳತಕ್ಕದ್ದು ಎಂಬುದಾಗಿ ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.
ಈ ಮೇಲಿನ ಸುತ್ತೋಲೆಯಲ್ಲಿ ‘ಎಲ್ಲಾ ಶಾಲೆಗಳಲ್ಲಿ ಕಾರ್ಯಕ್ರಮದ ಆರಂಭದಲ್ಲಿ ನಾಡಗೀತೆಯನ್ನು ಹಾಡುವುದು’ ಎಂಬುದರ ಬದಲಾಗಿ, ‘ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳಲ್ಲಿ’ ಎಂದು ಬದಲಾಯಿಸಲಾಗಿದೆ. ಹೀಗಾಗಿ ಖಾಸಗಿ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯವಲ್ಲ ಎಂಬರ್ಥ ಬರುತ್ತದೆ. ಹಾಗೆಂದು, ಖಾಸಗಿ ಶಾಲೆಗಳಲ್ಲಿ ನಾಡಗೀತೆ ಹಾಡಬಾರದು ಎಂದು ಸರ್ಕಾರದ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿಲ್ಲ ಎಂಬುದೂ ಗಮನಾರ್ಹ.