Fri. Mar 6th, 2026

ದ್ವೇಷ ಭಾಷಣ ವಿಧೇಯಕಕ್ಕೆ ಅಂಕಿತ ಹಾಕದಂತೆ ರಾಜ್ಯಪಾಲರಿಗೆ ಮನವಿ: ಶೋಭಾ ಕರಂದ್ಲಾಜೆ

Share this with Friends

ಬೆಂಗಳೂರು: ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕದ ಮೂಲಕ ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ತರಲು ಕಾಂಗ್ರೆಸ್ ಸರ್ಕಾರ ಮುಂದಾಗಿದ್ದು ಈ ವಿಧೇಯಕಕ್ಕೆ ಅಂಕಿತ ಹಾಕದಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ ಅಗತ್ಯ ಬಿದ್ದರೆ ರಾಷ್ಟ್ರಪತಿಗಳ ಬಳಿಗೂ ಹೋಗುತ್ತೇವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಧ್ವೇಷ ಭಟಷಣ ಕಾಯ್ದೆ ಮೂಲಕ ಮೊದಲ ಬಾರಿಗೆ ಡಿ.ಸಿ, ಎಸ್ಪಿ ನಮ್ಮ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಕಾಂಗ್ರೆಸ್ ವಿರುದ್ಧ ಮಾತನಾಡುವವರನ್ನು ನೂರಕ್ಕೆ ನೂರು ಹತ್ತಿಕ್ಕಿ ಅವರಿಗೆ ಶಿಕ್ಷೆ ಕೊಟ್ಟು, ಸಾರ್ವಜನಿಕ ಜೀವನದಿಂದ ಮುಗಿಸುವಂಥ ವ್ಯವಸ್ಥಿತ ಷಡ್ಯಂತ್ರ ಇದರಡಿ ಇದೆ. ಸರಕಾರದ ವಿರುದ್ಧ ನ್ಯಾಯಕ್ಕಾಗಿ ಹೋರಾಟ ಮಾಡಿದವರೆಲ್ಲರ ಮೇಲೆ ಈ ಕಾನೂನು ಅನ್ವಯ ಆಗಲಿದೆ ಎಂದರು.

ನಮ್ಮನ್ನು, ನಮ್ಮ ಸಂಘ ಸಂಸ್ಥೆ, ಕನ್ನಡ ಸಂಘಟನೆಗಳನ್ನು ದಮನ ಮಾಡಲು ಸರಕಾರ ಹೊರಟಿದೆ. ಯಾವುದೇ ಕಾರಣಕ್ಕೆ ಇದನ್ನು ಅನುಷ್ಠಾನಕ್ಕೆ ಬಿಡುವುದಿಲ್ಲ. ಇದರ ವಿರುದ್ಧ  ರಾಜ್ಯಪಾಲರಿಗೆ ಪತ್ರ ಬರೆದಿದ್ದೇನೆ. ಸಂವಿಧಾನದಡಿ ಇದಕ್ಕೆ ಒಪ್ಪಿಗೆ ಕೊಡದಿರಿ ಎಂದು ಕೋರಿದ್ದೇವೆ. ಅಗತ್ಯವಿದ್ದರೆ ಈ ಕುರಿತು  ರಾಷ್ಟ್ರಪತಿಗಳಿಗೂ ಗಮನ ಸೆಳೆಯಲಿದ್ದೇನೆ ಎಂದರು.

ಹತ್ತಿಕ್ಕುವ ವ್ಯವಸ್ಥಿತ ಷಡ್ಯಂತ್ರ:

ಈ ವಿಧೇಯಕ ಎರಡೂ ಸದನಗಳಲ್ಲಿ ಅನುಮೋದನೆ ಪಡೆದಿದೆ. ಸಂವಿಧಾನದ 19 (1) ಪರಿಚ್ಛೇದ, (2) ಪರಿಚ್ಛೇದದಡಿ ವಾಕ್ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ ಆಗಿದೆ. ಯಾವ ಕಾಂಗ್ರೆಸ್ಸಿನವರು ಸಂವಿಧಾನದ ಪ್ರತಿ ಹಿಡಿದು ಓಡಾಡುತ್ತಾರೋ, ಆ ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಂಗ್ರೆಸ್ ಸರಕಾರ ಕಿತ್ತುಕೊಳ್ಳುತ್ತಿದೆ ಎಂದು ಆಕ್ಷೇಪಿಸಿದರು.

ಯಾರೇ ತಪ್ಪು ಮಾಡಿದರೂ ಶಿಕ್ಷೆ ಯಾರು ಕೊಡಬೇಕು? ಶಾಸಕಾಂಗ, ಕಾರ್ಯಾಂಗದ ಕೆಲಸ, ನ್ಯಾಯಾಂಗದ ಕಾರ್ಯವನ್ನು ಕೇಶವಾನಂದ ಭಾರತೀ ಕೇಸಿನಲ್ಲಿ ಸುಪ್ರೀಂ ಕೋರ್ಟ್ ಬಹಳ ಸ್ಪಷ್ಟವಾಗಿ ತಿಳಿಸಿದೆ. ಇವತ್ತು ಕಾಂಗ್ರೆಸ್ ಸರಕಾರವು ನ್ಯಾಯಾಂಗದ ಕೆಲಸವನ್ನು ಬದಲಿಸಲು ಹೊರಟಿದೆ. 10 ವರ್ಷಗಳ ತನಕ ಶಿಕ್ಷೆ, 1 ಲಕ್ಷ ದಂಡಕ್ಕೆ ಅವಕಾಶ ಇರಲಿದೆ ಎಂದು ಆರೋಪಿಸಿದರು.

ರಾಹುಲ್ ಗಾಂಧಿಯವರು ಮೋದಿಯವರ ಬಗ್ಗೆ ಸಾವಿನ ಸರದಾರ ಎಂದಿದ್ದರು. ಕಾಂಗ್ರೆಸ್ಸಿನಿಂದ ಏನು ಕ್ರಮ ಕೈಗೊಳ್ಳಲಾಗಿದೆ? ಹುಬ್ಬಳ್ಳಿ, ಮೈಸೂರು ಮೊದಲಾದ ಕಡೆ ಪೊಲೀಸ್ ಠಾಣೆ ಸುಟ್ಟರು? ನೀವೇನು ಕ್ರಮ ಕೈಗೊಂಡಿದ್ದೀರಿ? ಅವರ ಕೇಸನ್ನು ಸಚಿವಸಂಪುಟದಲ್ಲಿ ರದ್ದು ಮಾಡಲಾಗಿದೆ. ಇದು ನಿಮ್ಮ ತುಷ್ಟೀಕರಣ ರಾಜಕೀಯ ಎಂದು ಆಕ್ಷೇಪಿಸಿದರು.

ಫ್ಯಾಕ್ಟ್ ಚೆಕ್ ಏಜೆನ್ಸಿ:

ಬಹಳ ಮುಖ್ಯವಾಗಿ ಇವತ್ತು ಕರ್ನಾಟಕದಲ್ಲಿ ಫ್ಯಾಕ್ಟ್ ಚೆಕ್ ಏಜೆನ್ಸಿ ಹೊಸದಾಗಿ ಆರಂಭವಾಗಿದೆ. ಈ ಏಜೆನ್ಸಿಯ ಸಭೆಯನ್ನು 2023ರಲ್ಲಿ ರಜನೀಶ್ ಗೋಯಲ್ ಅವರ ನೇತೃತ್ವದಲ್ಲಿ ಮಾಡಲಾಗಿದೆ. ಇದರಲ್ಲಿ ಖಾಸಗಿ ಜನರಿದ್ದಾರೆ; ಖಾಸಗಿ ಏಜೆನ್ಸಿಯವರು, ಕಾಂಗ್ರೆಸ್ಸಿಗೆ ಸಹಾಯ ಮಾಡುವಂಥ ಕೆಲವು ಸಂಸ್ಥೆಗಳಿವೆ. ಇದರ ಅಧ್ಯಕ್ಷತೆಯನ್ನು ಪ್ರಿಯಾಂಕ್ ಖರ್ಗೆ ವಹಿಸುತ್ತಾರೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಗೃಹ ಸಚಿವರು ಎಲ್ಲರೂ ಇರುತ್ತಾರೆ. ಆದರೆ, ಫ್ಯಾಕ್ಟ್ ಚೆಕ್ ಏಜೆನ್ಸಿಯ ಜವಾಬ್ದಾರಿಯನ್ನು ಪ್ರಿಯಾಂಕ್ ಖರ್ಗೆಯವರಿಗೆ ಕೊಟ್ಟಿದ್ದಾರೆ ಎಂದು ವಿವರಿಸಿದರು.

ವರ್ಷಕ್ಕೆ 3ರಿಂದ 4 ಕೋಟಿ ರೂ. ಖರ್ಚು:

ಈ ಏಜೆನ್ಸಿಗೆ ಸರಕಾರವು ವರ್ಷಕ್ಕೆ 3ರಿಂದ 4 ಕೋಟಿ ರೂ. ಖರ್ಚು ಮಾಡುತ್ತಿದೆ. ಕಾಂಗ್ರೆಸ್ ಚಮಚಾಗಳು, ಚೇಲಾಗಳಿಗೆ ಒಂದು ಜವಾಬ್ದಾರಿ ಕೊಡುವ ಉದ್ದೇಶ ಇದರ ಹಿಂದಿದೆ. ಅವರು ಮಾಧ್ಯಮಗಳನ್ನು ಗಮನಿಸಿ ಸರಕಾರಕ್ಕೆ ವರದಿ ಕೊಡಬೇಕಿದೆ. ಸಂಬಂಧಿತ ಎಸ್ಪಿಗೆ ಹೇಳಿ ಕೇಸ್ ಮಾಡಿಸುವುದು ಫ್ಯಾಕ್ಟ್ ಚೆಕ್ ಏಜೆನ್ಸಿಯ ಕೆಲಸ.ಇಡೀ ರಾಜ್ಯದಲ್ಲಿ ದ್ವೇಷ ಹುಟ್ಟುಹಾಕುವ, ಬಾಯಿಗೆ ಬಂದಂತೆ ಮಾತನಾಡುವ ಮಿಸ್ಟರ್ ಪ್ರಿಯಾಂಕ್ ಖರ್ಗೆ ಇದರ ನೇತೃತ್ವ ವಹಿಸಿದ್ದಾರೆ. ಇವರಿಂದ ನ್ಯಾಯ ಸಿಗುತ್ತದೆ ಎಂದು ನಾವು ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ರಾಜ್ಯದಿಂದ ತಾಲ್ಲೂಕು ಮಟ್ಟದ ವರೆಗೆ ಏಜೆನ್ಸಿ ಇದ್ದು, ಇದಕ್ಕೆ ಸರಕಾರ ತೆರಿಗೆ ಹಣವನ್ನು ಕೊಡುತ್ತಿದೆ. ಬಿಜೆಪಿಯ ಸಾಮಾಜಿಕ ಜಾಲತಾಣದ 35 ಜನರ ಮೇಲೆ ಕೇಸ್ ಹಾಕಿದ್ದಾರೆ. ಎಂಎಲ್‍ಎ, ಎಂಎಲ್‍ಸಿಯವರ ಮೇಲೆ ಕೇಸ್ ಹಾಕಿದ್ದು, ಈ ಏಜೆನ್ಸಿಯ ಕೆಲಸ. ಇವರು ಯಾರು ಯಾರ ವಿರುದ್ಧ ಮಾತನಾಡುತ್ತಾರೆ, ಯಾರು ಸಾಮಾಜಿಕ ಜಾಲತಾಣದಲ್ಲಿ ಬರೆಯುತ್ತಾರೆಂದು ವರದಿ ಕೊಡುತ್ತಾರೆ. ಇದರ ಆಧಾರದಲ್ಲಿ ಸರಕಾರ ಕೇಸ್ ಹಾಕುತ್ತಿದೆ ಎಂದು ಟೀಕಿಸಿದರು.

ಈ ಏಜೆನ್ಸಿಯಲ್ಲಿ ಟೊಯಾಲಿಕಾ ಟೆಕ್ನಾಲಜೀಸ್‍ನ ಸಾಗರ್ ಮಿಶ್ರಾ ನಿರ್ದೇಶಕರು. ರಾಜ್‍ಟೆಲ್ ಇಂಡಿಯದ ಗೋವಿಂದ ರೆಡ್ಡಿ, ಸೈಕತ್ ರಾಯ್, ಕಿರಣ್, ಪುನೀತ್ ಹೆಸರನ್ನು ಅಕ್ಷರದಲ್ಲಿ ಬರೆದಿದ್ದು, ಟೈಪ್ ಮಾಡಿಲ್ಲ; ಇವರೆಲ್ಲರೂ ಇದರ ನಿರ್ದೇಶಕರು ಎಂದು ತಿಳಿಸಿದರು. ಗೌರಿ ಮೀಡಿಯ ಟ್ರಸ್ಟಿನ ಗುರುಪ್ರಸಾದ್ ಡಿ.ಎನ್, ನ್ಯೂಸ್ ಪ್ಲಸ್‍ನ ಪುನೀತ್- ಈ ರೀತಿ ಹಲವು ಖಾಸಗಿ ವ್ಯಕ್ತಿಗಳನ್ನು ಸೇರಿಸಿ ಏಜೆನ್ಸಿ ಮಾಡಿದ್ದಾರೆ ಎಂದರು.


Share this with Friends

Related Post