ವರುಣಾ: ಮೈಸೂರು ಮತ್ತು ಚಾಮರಾಜನಗರದಲ್ಲಿ ಕಾಂಗ್ರೆಸ್ ಗೆದ್ದರೆ ನನ್ನ ಶಕ್ತಿ ಹೆಚ್ಚುತ್ತದೆ, ನಾನು ಇನ್ನಷ್ಟು ಗಟ್ಟಿಯಾಗುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಮಾರ್ಮಿಕವಾಗಿ ಮಾತುಗಳನ್ನಾಡಿದ್ದಾರೆ. ವರುಣಾ ವಿಧಾನಸಭಾ ಕ್ಷೇತ್ರದ ಬಿಳಿಗೆರೆಯಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ನನಗಿಂತ ಹೆಚ್ಚು ಲೀಡ್ ಕೊಟ್ಟು ಸುನಿಲ್ ಬೋಸ್ ಗೆಲ್ಲಿಸಿ ಬಿಜೆಪಿಯ ಸುಳ್ಳುಗಳನ್ನು ಸೋಲಿಸಿ. ಇದಕ್ಕೆ ನೀವು ಮುಂದಾಗಿ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.
ವರುಣಾ ನನ್ನ ಪಾಲಿಗೆ ಅದೃಷ್ಟದ ಕ್ಷೇತ್ರ. ನಿಮ್ಮಿಂದ ಎರಡು ಬಾರಿ ಮುಖ್ಯಮಂತ್ರಿಯಾದೆ ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿ.ಎಂ.ಸಿದ್ದರಾಮಯ್ಯ ಅವರು ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸಿದರು.
ನಮ್ಮ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳಿಂದಾಗಿ ರಾಜ್ಯದಲ್ಲಿ ಹೆಣ್ಣುಮಕ್ಕಳ ಆರ್ಥಿಕ ಸಾಮರ್ಥ್ಯ ಹೆಚ್ಚಿದೆ. ದುಡಿಯುವ ಅವಕಾಶವೂ ಹೆಚ್ಚಿದೆ. ಪುರುಷರ ಜೇಬಿಗೆ ಹಣ ಉಳಿತಾಯವಾಗಿದೆ. ಜನಸಾಮಾನ್ಯರ ಜೇಬಿಗೆ ಹಣ ಹಾಕಿ ನಮ್ಮ ಜನರ ಕೊಳ್ಳುವ ಶಕ್ತಿ ಹೆಚ್ಚಿಸಿದ್ದೇವೆ. ಇದನ್ನು ವಿರೋಧಿಸುವ ಬಿಜೆಪಿಯ ಕಾರ್ಯಕರ್ತರೂ, ಬೆಂಬಲಿಗರೂ ನಮ್ಮ ಗ್ಯಾರಂಟಿ ಯೋಜನೆಗಳ ಫಾಲಾನುಭವಿಗಳಾಗಿದ್ದಾರೆ ಎಂದರು.
ನರೇಂದ್ರ ಮೋದಿ ನುಡಿದಂತೆ ನಡೆದಿದ್ದಾರಾ? ದೇಶದ ಜನರಿಗಾಗಿ ಏನೂ ಕಾರ್ಯಕ್ರಮ ರೂಪಿಸದೆ ಕೇವಲ ಅಚ್ಛೆ ದಿನ್ ಆಯೆಗಾ ಎಂದು ಡೈಲಾಗ್ ಹೊಡೆದರೆ ಸಾಕಾ? ಡೈಲಾಗ್ ನಿಂದ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ , ರಸಗೊಬ್ಬರ ಬೆಲೆ ಕಡಿಮೆ ಆಗತ್ತಾ? ಬರೀ ಬಾಯಲ್ಲಿ ಡೈಲಾಗ್ ಹೊಡೆದರೆ ಜನರ ಬದುಕಿನ ಸಂಕಷ್ಟ ಕಡಿಮೆ ಆಗ್ತದಾ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬರೀ 56 ಇಂಚಿನ ಖಾಲಿ ಎದೆ ಇದ್ದರೆ ಸಾಲದು. ಅದರೊಳಗೆ ಮಾತೃ ಹೃದಯ ಇರಬೇಕು. ಇಲ್ಲದಿದ್ದರೆ ಹೀಗೇ ಆಗೋದು. ಉದ್ಯೋಗ ಸೃಷ್ಟಿ ಆಗೋದಿಲ್ಲ. ರೈತರ ಆದಾಯವೂ ದುಪ್ಪಟ್ಟಾಗುವುದಿಲ್ಲ ಎಂದು ಟೀಕಿಸಿದರು.