ಮೈಸೂರು: ರಾಜ್ಯ ರಾಜಕಾರಣದಲ್ಲಿ ದೀರ್ಘಕಾಲದಿಂದ ಸಂಚಲನ ಮೂಡಿಸುತ್ತಿದ್ದ ‘ನಾಯಕತ್ವ ಬದಲಾವಣೆ’ ಅಥವಾ ‘ಅಧಿಕಾರ ಹಂಚಿಕೆ’ಯ ಊಹಾಪೋಹಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ, ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಇಂದು ತೆರೆ ಎಳೆದಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಪೂರ್ಣ 5 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಘೋಷಿಸಿದ್ದಾರೆ. ನಾಯಕತ್ವ ಬದಲಾವಣೆ ಕುರಿತು ಕಾಂಗ್ರೆಸ್ ಹೈಕಮಾಂಡ್ ಈಗಾಗಲೇ ಸ್ಪಷ್ಟವಾದ ನಿರ್ಧಾರ ಕೈಗೊಂಡಿದೆ. ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಮಾಡುವ ಉದ್ದೇಶ ಪಕ್ಷಕ್ಕಿಲ್ಲ ಮತ್ತು ಈ ಬಗ್ಗೆ ಹೈಕಮಾಂಡ್ನಿಂದ ಸ್ಪಷ್ಟವಾದ “ಗ್ರೀನ್ ಸಿಗ್ನಲ್” ದೊರೆತಿದೆ ಎಂದು ಅವರು ತಿಳಿಸಿದ್ದಾರೆ.
“ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಎಂಬುದು ಸದ್ಯಕ್ಕೆ ಸೆಟ್ಲಡ್ ಇಶ್ಯೂ (ಮುಗಿದುಹೋದ ಅಧ್ಯಾಯ). ಈ ಬಗ್ಗೆ ಚರ್ಚೆಗಳು ನಡೆಯುತ್ತಿರುವುದು ಕೇವಲ ಮಾಧ್ಯಮಗಳಲ್ಲಿ ಮಾತ್ರ” ಎಂದರು.
ಮುಡಾ ಪ್ರಕರಣದಲ್ಲಿ ಕ್ಲೀನ್ ಚಿಟ್: ಸಿದ್ದರಾಮಯ್ಯ ಅವರಿಗೆ ಮುಡಾ ಹಗರಣದ ಆರೋಪದಲ್ಲಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ‘ಬಿ’ ರಿಪೋರ್ಟ್ ಅನ್ನು ನ್ಯಾಯಾಲಯ ಅಂಗೀಕರಿಸಿರುವುದು ಅವರ ನೈತಿಕ ಮತ್ತು ರಾಜಕೀಯ ಬಲವನ್ನು ಹೆಚ್ಚಿಸಿದೆ ಎಂದು ಯತೀಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಸ್ತಕ್ಷೇಪದ ಆರೋಪ ನಿರಾಕರಣೆ: ಇಂಧನ ಇಲಾಖೆಯಲ್ಲಿ ತಮ್ಮ ಹಸ್ತಕ್ಷೇಪವಿದೆ ಎಂಬ ಆರೋಪಗಳನ್ನು ಯತೀಂದ್ರ ಸಿದ್ದರಾಮಯ್ಯ ಅವರು ತಳ್ಳಿಹಾಕಿದ್ದಾರೆ. ಸಚಿವ ಕೆ.ಜೆ. ಜಾರ್ಜ್ ಅವರು ತಮ್ಮ ಹಸ್ತಕ್ಷೇಪದಿಂದ ಬೇಸತ್ತು ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂಬ ವರದಿಗಳು ಕೇವಲ ಮಾಧ್ಯಮಗಳ ಸೃಷ್ಟಿ ಮತ್ತು ಸತ್ಯಕ್ಕೆ ದೂರವಾದವು ಎಂದು ತಿಳಿಸಿದ್ದಾರೆ

