ಬೆಂಗಳೂರು: “ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಆಗಿ ಮುಂದುವರಿಯಲಿದ್ದಾರೆ” ಎಂಬ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಯು ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ಅಸ್ತಿತ್ವದ ಬಗ್ಗೆಯೇ ಪ್ರಶ್ನೆ ಎತ್ತುವಂತೆ ಮಾಡಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಸದ್ಯಕ್ಕೆ ಅಸಲಿ ಹೈಕಮಾಂಡ್ ಎಲ್ಲಿದೆ ಎಂಬುದು ಯಾರಿಗೂ ತಿಳಿಯುತ್ತಿಲ್ಲ. ಕಾಂಗ್ರೆಸ್ ಹೈಕಮಾಂಡ್ ಇರುವುದು ದೆಹಲಿಯಲ್ಲೋ ಅಥವಾ ಮುಖ್ಯಮಂತ್ರಿಗಳ ಮನೆಯಲ್ಲೋ ಎಂದು ಲೇವಡಿ ಮಾಡಿದರು.
ಯತೀಂದ್ರ ಅವರ ಹೇಳಿಕೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಆಂತರಿಕ ಸಂಘರ್ಷ ಬೀದಿಗೆ ಬಂದಿರುವುದನ್ನು ತೋರಿಸುತ್ತದೆ. ಇದು ಕೇವಲ ಅಧಿಕಾರಕ್ಕಾಗಿ ನಡೆಯುತ್ತಿರುವ ಯುದ್ಧ ಎಂದು ಅಶೋಕ್ ಟೀಕಿಸಿದರು.
ರಾಜ್ಯದಲ್ಲಿ ವರ್ಗಾವಣೆ ದಂಧೆ ಮತ್ತು ಭ್ರಷ್ಟಾಚಾರ ಮಿತಿಮೀರಿದೆ. ಮುಖ್ಯಮಂತ್ರಿ ಕುರ್ಚಿಯ ಮೇಲಿನ ಈ ಎಳೆದಾಟದಿಂದಾಗಿ ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿದ್ದು, ಸರ್ಕಾರ ಕೋಮಾ ಹಂತಕ್ಕೆ ತಲುಪಿದೆ ಎಂದು ಅವರು ಆರೋಪಿಸಿದರು.
ಸಿಎಂ ಅಧಿಕಾರ ಅವಧಿಯ ಬಗ್ಗೆ ಹೇಳಿಕೆ ನೀಡಲು ಯತೀಂದ್ರ ಯಾರು? ಅವರು ಕಾಂಗ್ರೆಸ್‌ನ ನೂತನ ಹೈಕಮಾಂಡ್ ಆಗಿದ್ದಾರೆಯೇ ಎಂದು ಪ್ರಶ್ನಿಸಿದ ಅಶೋಕ್, ಮಗನ ಮೂಲಕ ಸಿದ್ದರಾಮಯ್ಯ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು.
ಸರ್ಕಾರದಲ್ಲಿನ ವೈಫಲ್ಯಗಳು ಮತ್ತು ಹಗರಣಗಳನ್ನು ಮುಚ್ಚಿ ಹಾಕಲು ಕಾಂಗ್ರೆಸ್ ಇಂತಹ “ಉತ್ತರಾಧಿಕಾರ ಸಮರ” ಅಥವಾ “ಅಧಿಕಾರ ಹಂಚಿಕೆ” ವಿಷಯಗಳನ್ನು ಮುನ್ನೆಲೆಗೆ ತರುತ್ತಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್‌ನ ಲೂಟಿ ನೋಡಿ ಗಾಂಧೀಜಿಯ ಕೈಗೆ ಕೋಲು ಬಂದಿದೆ:
ಕಾಂಗ್ರೆಸ್ ಲೂಟಿಯನ್ನು ನೋಡಿ ಗಾಂಧೀಜಿಯ ಕೈಗೆ ಕೋಲು ಬಂದಿದೆ ಎಂಬ ಬಿಜೆಪಿಯ ಇತ್ತೀಚಿನ ಜಾಹೀರಾತುಗಳನ್ನು ಅವರು ಸಮರ್ಥಿಸಿಕೊಂಡ ಅಶೋಕ್ ಕಾಂಗ್ರೆಸ್ ಸರ್ಕಾರವು ಗಾಂಧೀಜಿ ಹೆಸರನ್ನು ಕೇವಲ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ ಎಂದು ಟೀಕಿಸಿದರು
ಅಬಕಾರಿ ಇಲಾಖೆಯಲ್ಲಿ ನಡೆದ 6,000 ಕೋಟಿ ರೂ. ಹಗರಣ ಸಂಬಂಧ ಐದು ದಾಖಲೆಗಳನ್ನು ಹಾಗೂ ಆಡಿಯೋ ದಾಖಲೆಗಳನ್ನು ನೀಡಿದ್ದೇನೆ. ಇಷ್ಟಾದರೂ ಸರ್ಕಾರ ಇನ್ನೂ ಸಾಕ್ಷಿ ಕೇಳುತ್ತಿದೆ. ಈ ಹಿಂದೆ 40 ಪರ್ಸೆಂಟ್ ಭ್ರಷ್ಟಾಚಾರವೆಂದು ಗುತ್ತಿಗೆದಾರರು ಹೇಳಿದ್ದಕ್ಕೆ ಕಾಂಗ್ರೆಸ್ ನಾಯಕರು ಅಂದಿನ ಬಿಜೆಪಿ ಸರ್ಕಾರದ ಮೇಲೆ ಆರೋಪ ಮಾಡಿತ್ತು. ಈಗ ಮದ್ಯ ಮಾರಾಟಗಾರರ ಸಂಘದವರು 80 ಪರ್ಸೆಂಟ್ ಭ್ರಷ್ಟಾಚಾರವೆಂದು ಹೇಳಿದ್ದು, ಆ ಬಗ್ಗೆ ರಾಹುಲ್ ಗಾಂಧಿಗೂ ದೂರು ನೀಡುವುದಾಗಿ ಹೇಳಿದ್ದಾರೆ. ಆದರೂ ಸಿಎಂ ಸಿದ್ದರಾಮಯ್ಯ, ಸಚಿವ ತಿಮ್ಮಾಪುರ ಅವರ ರಾಜೀನಾಮೆ ಪಡೆಯದೆ ಜನರಿಗೆ ದ್ರೋಹ ಮಾಡಿದ್ದಾರೆ ಎಂದರು.
ಸಿಎಂ ಸಿದ್ದರಾಮಯ್ಯ ಕೂಡ ಇದರಲ್ಲಿ ಭಾಗಿಯಾಗಿರುವುದರಿಂದ ಅವರು ಸಚಿವರ ರಾಜೀನಾಮೆ ಪಡೆದಿಲ್ಲ ಎಂದು ಜನರು ಹೇಳುತ್ತಿದ್ದಾರೆ. ಇದರ ವಿರುದ್ಧ ಇನ್ನಷ್ಟು ಹೋರಾಟ ಮಾಡಿ 6,000 ಕೋಟಿ ರೂ. ವಸೂಲಿ ಮಾಡಿ ಜನರ ಹಣ ಉಳಿಸುತ್ತೇವೆ ಎಂದರು.

