Sun. Dec 22nd, 2024

ವಿಜಯೇಂದ್ರ ಮೇಲಿನ ಸಿದ್ದರಾಮಯ್ಯ ಆರೋಪ ಸುಳ್ಳು: ಅನ್ವರ್ ಮಾಣಿಪ್ಪಾಡಿ

Share this with Friends

ಮಂಗಳೂರು: ವಕ್ಫ್ ಆಸ್ತಿ ಕಬಳಿಕೆ ಬಗ್ಗೆ ಮೌನವಾಗಿರಲು ವಿಜಯೇಂದ್ರ ಅವರು 150 ಕೋಟಿ ಆಫರ್ ಮಾಡಿದ್ದರೆಂಬ ಸಿಎಂ ಸಿದ್ದರಾಮಯ್ಯ ಆರೋಪ ಸುಳ್ಳು ಎಂದು ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ತಿಳಿಸಿದ್ದಾರೆ.

ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣವನ್ನು ಮುಚ್ಚಿ ಹಾಕಲು ಕಾಂಗ್ರೆಸ್‌ನವರೇ ಕೋಟಿ,ಕೋಟಿ ಹಣ ನೀಡುವ ಆಫರ್ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಸಿಎಂ ಸಿದ್ದರಾಮಯ್ಯನವರು ಮಾಡಿದ ಆರೋಪ ಸುಳ್ಳು, ವಿಜಯೇಂದ್ರ ಯಾವುದೇ ರೀತಿಯ ಹಣದ ಬೇಡಿಕೆ ನೀಡಿಲ್ಲ, ಸರ್ಕಾರ ತನಿಖೆ ಮಾಡಬೇಕೆಂದು ವಿಜಯೇಂದ್ರ ಅವರನ್ನು ಯಡಿಯೂರಪ್ಪ ಸಿಎಂ ಆಗಿದ್ದಾಗ ಒತ್ತಾಯಿಸಿದ್ದೆ. ಆದರೆ, ಹಣದ ಬೇಡಿಕೆ ಇಟ್ಟಿಲ್ಲ. ಈ ವರದಿಯನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ ಎಲ್ಲರ ವಿರುದ್ಧ ಕಿಡಿಕಾರಿದ್ದು ಸತ್ಯ. ಸಿಎಂ ಸಿದ್ದರಾಮಯ್ಯನವರು ಹೇಳಿದ ಹಾಗೇನೆ ಸಿಬಿಐಗೆ ವಹಿಸಲಿ ಎಲ್ಲ ಹೊರ ಬರುತ್ತದೆ ಎಂದು ‌ಹೇಳಿದರು.

ವಕ್ಫ್ ವರದಿಯನ್ನು ಮುಚ್ಚಿ ಹಾಕಲು ಕಾಂಗ್ರೆಸ್‌ನವರೇ ನನಗೆ ಹಣದ ಆಮಿಷ ಒಡ್ಡಿದ್ದರು. 2012ರಿಂದಲೂ ಶುರು ಮಾಡಿ ಮರ‍್ನಾಲ್ಕು ವರ್ಷಗಳಿಂದ ಆಫರ್ ನೀಡುತ್ತಾ ಬಂದಿದ್ದರು. ನಾನು ಬೈದು ಕಳುಹಿಸಿದೆ ಎಂದು ಮಾಣಿಪ್ಪಾಡಿ ಹೊಸ ಬಾಂಬ್ ಸಿಡಿಸಿದರು.

ಪ್ರಧಾನ ಮಂತ್ರಿಗಳಿಗೂ ವರದಿ ಸಂಬಂಧ ಬಹಳಷ್ಟು ಪತ್ರಗಳನ್ನು ಬರೆಯಲಾಗಿದೆ, ಕೇಂದ್ರ ಸರ್ಕಾರ ಇದನ್ನು ಪರಿಗಣಿಸಿ ತನಿಖಾ ಸಂಸ್ಥೆಗೆ ಹಸ್ತಾಂತರಿಸಬೇಕು ಎಂದು ಕೇಳಿಕೊಂಡಿದ್ದೆ ಎಂದು ತಿಳಿಸಿದರು.

ನಮ್ಮ ವಕ್ಫ್ ನ ಒಟ್ಟು ಆಸ್ತಿ 50 ಸಾವಿರ ಎಕರೆ ಇದ್ದಾಗ, ಅದರಲ್ಲಿ 27-28 ಸಾವಿರ ಎಕರೆ ಕಬಳಿಕೆ ಆಗಿ ಬಾಕಿ ಉಳಿದಿದ್ದು 23 ಸಾವಿರ ಎಕರೆ. ಆಗ ಸಿದ್ದರಾಮಯ್ಯ ಅವರು 1,60,000 ಎಕರೆಗೆ ನೋಟಿಸ್ ಕೊಡ್ತಾರೆ ಬೇರೆ ಬೇರೆ ರೈತರಿಗೆ.

ಇದು ಯಾಕೆ ಗೊತ್ತಾ ಮುಸ್ಲಿಂ ಮತ್ತು ಹಿಂದೂಗಳ ನಡುವೆ ಕಿಡಿ ಹೊತ್ತಿಸಿ ಅವರಿಬ್ಬರು ಹೊಡೆದಾಡಿಕೊಳ್ಳಲಿ ಅಂತಾ.

ಅವರು ಅಷ್ಟು ಸತ್ಯವಂತರಾಗಿದ್ದರೆ ಒಮ್ಮೆ ನೋಟಿಸ್ ಕೊಟ್ಟವರು ಹಿಂದಕ್ಕೆ ಯಾಕೆ ಪಡೆದುಕೊಳ್ತಾರೆ ಕೇವಲ 23-24 ಸಾವಿರ ಎಕರೆ ಇರಬೇಕಾದರೆ, 1,60,000 ಎಕರೆಗೆ ಹೇಗೆ ನೋಟಿಸ್ ಕೊಟ್ಟರು ಎಂದು ಮಾಣಿಪ್ಪಾಡಿ ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರಿಗೆ ಕಿಂಚಿತ್ತಾದರೂ ಅಲ್ಪಸಂಖ್ಯಾತರ ಮೇಲೆ ಪ್ರೀತಿ ಇದ್ದರೆ, ಆ ಸಮುದಾಯಕ್ಕೆ ಏನಾದರು ಮಾಡಬೇಕೆಂಬ ಮನಸ್ಸಿದರೆ ನಾನು ಕೊಟ್ಟ ವರದಿಯನ್ನು ಸಿಬಿಐ ತನಿಖೆಗೆ ಹಸ್ತಾಂತರ ಮಾಡಲಿ ಎಂದು ಅನ್ವರ್ ಮಾಣಿಪ್ಪಾಡಿ ಒತ್ತಾಯಿಸಿದರು.


Share this with Friends

Related Post