Thu. Dec 26th, 2024

ಚಾ.ನಗರ ಮತದಾರರಿಗೆ ಹೃದಯ ತುಂಬಿ ಕೃತಜ್ಞತೆ ಸಲ್ಲಿಸಿದ ಸಿದ್ದು

Share this with Friends

ಚಾಮರಾಜನಗರ,ಜು.10: ನನ್ನ, ನಿಮ್ಮ ಸಂಬಂಧ 40 ವರ್ಷಗಳಷ್ಟು ಹಳೆಯದು ಜತೆಗೆ ಗಟ್ಟಿತನದ್ದು ಎಂದು ಸಿಎಂ ಸಿದ್ದರಾಮಯ್ಯ ಹೃದಯ ತುಂಬಿ ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ತಂದುಕೊಟ್ಟ ಚಾಮರಾಜನಗರ ಕ್ಷೇತ್ರದ ಮತದಾರರಿಗೆ ಆಯೋಜಿಸಿದ್ದ ಕೃತಜ್ಞತಾ ಸಭೆಯನ್ನು ಉದ್ಘಾಟಿಸಿ ಮುಖ್ಯ ಮಂತ್ರಿಗಳು ಮಾತನಾಡಿದರು.

ಮತದಾರರಿಗೆ‌ ಕೃತಜ್ಞತೆ ಸಲ್ಲಿಸಿದ ಸಿದ್ದು,ಕೇಂದ್ರದಲ್ಲಿ ರಾಜ್ಯದ ಪರವಾಗಿ ನಿರಂತರ ಹೋರಾಟ ಮುಂದುವರೆಸಿ ಎಂದು ರಾಜ್ಯದ ಸಂಸದರಿಗೆ ಕರೆ ನೀಡಿದರು.

ನೆಹರೂ ಅವಧಿಯಿಂದ ಇವತ್ತಿನವರೆಗೆ ಕಾಂಗ್ರೆಸ್ ನಿರಂತರವಾಗಿ ಸಮಾಜದ ಸಮಗ್ರ ಅಭಿವೃದ್ಧಿಗೆ, ಸರ್ವ ಜನರ ಪ್ರಗತಿ ಮತ್ತು ಸಾಮರಸ್ಯಕ್ಕಾಗಿ ಶ್ರಮಿಸುತ್ತಿದೆ. ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂದು ಹೇಳಿದರು.

ಅಂಬೇಡ್ಕರ್ ಅವರ ಸಂವಿಧಾನದ ಅಡಿಯಲ್ಲಿ ದಲಿತರು, ಮಹಿಳೆಯರು, ಹಿಂದುಳಿದವರು, ಎಲ್ಲಾ ಜಾತಿಯ ಬಡವರಿಗೆ ಆರ್ಥಿಕ, ಸಾಮಾಜಿಕ ಶಕ್ತಿಯನ್ನು ಕೊಡಬೇಕು ಎನ್ನುವುದೇ ನನ್ನ ಗುರಿ,ಇದು ನಮ್ಮ ಪಕ್ಷದ ಆಧ್ಯತೆ ಕೂಡಾ ಆಗಿದೆ ಎಂದು ತಿಳಿಸಿದರು.

ಈ ದೇಶದ ಸ್ವಾತಂತ್ರ್ಯಕ್ಕಾಗಿ ಅತಿ ಹೆಚ್ಚು ಪ್ರಾಣ, ಆಸ್ತಿ, ಪಾಸ್ತಿ ಕಳೆದುಕೊಂಡವರು ನಮ್ಮ ಕಾಂಗ್ರೆಸ್ಸಿಗರು, ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಮಹಾತ್ಮಗಾಂಧಿ ಕರೆ ಕೊಟ್ಟಾಗ ಜನಸಂಘದವರು ಬ್ರಿಟಿಷರ ಜೊತೆ ಕೈಜೋಡಿಸಿದರೆ ಉಳಿದ ಭಾರತೀಯರೆಲ್ಲರೂ ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಿದರು ಎಂದು ಹೋರಾಟದ ದಿನಗಳನ್ನು ಸ್ಮರಿಸಿದರು.

ಸರ್ವ ಜಾತಿ ಜನಾಂಗಗಳ ಅನುಕೂಲಕ್ಕಾಗಿ ಕಾಂಗ್ರೆಸ್ ನಿರಂತರವಾಗಿ ಹಲವು ಭಾಗ್ಯಗಳನ್ನು ನೀಡುತ್ತಾ ಬಂದಿದೆ. ನಾನು ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಐದು ಗ್ಯಾರಂಟಿಗಳನ್ನು ನಾಡಿನ ಜನತೆಯ ಮನೆ ಮನೆಗೆ ತಲುಪಿಸಿದ್ದೇವೆ. ಆದರೂ ಬಿಜೆಪಿಯವರು ನಿರಂತರ ಸುಳ್ಳುಗಳನ್ನು ಹುಟ್ಟುಹಾಕುತ್ತಾ, ಗ್ಯಾರಂಟಿಗಳಿಗೆ ಹಣ ಇಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಬಜೆಟ್ ನಲ್ಲಿ ಘೋಷಿಸಿರುವ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಹಣದ ಕೊರತೆ ಇಲ್ಲ, ನಮ್ಮ ಗ್ಯಾರಂಟಿ ಯೋಜನೆಗಳು ನಮ್ಮ ಸರ್ಕಾರ ಇರುವವರೆಗೂ ಜಾರಿಯಲ್ಲಿರುತ್ತವೆ ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಇದೇ ವೇಳೆ ಜನತೆಗೆ ಸಿಎಂ ಬರವಸೆ ನೀಡಿದರು.

ರಾಜ್ಯಕ್ಕೆ ಬರಗಾಲ ಬಂದರೂ ಕೇಂದ್ರ ಸರ್ಕಾರ ನಮ್ಮ ರಾಜ್ಯದ ಪಾಲಿನ ಹಣ ಕೊಡಲಿಲ್ಲ,ನಾವು ಕಾನೂನು ಹೋರಾಟ ಶುರು ಮಾಡಿದೆವು. ಸುಪ್ರೀಂಕೋರ್ಟ್ ಛೀಮಾರಿ ಹಾಕಿದ ಬಳಿಕವೇ ರಾಜ್ಯದ ಪಾಲಿನ ಸ್ವಲ್ಪ ಹಣ ಬಿಡುಗಡೆ ಮಾಡಿತು. ಹೀಗಾಗಿ ಕೇಂದ್ರದಲ್ಲಿ ರಾಜ್ಯದ ಪರವಾಗಿ ಹೋರಾಟ ಮುಂದುವರೆಸಲು ಎಲ್ಲಾ 28 ಮಂದಿ ಸಂಸದರಿಗೆ ಕರೆ ನೀಡಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಸಚಿವರುಗಳಾದ ಹೆಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಜಮೀರ್ ಅಹಮದ್ ಖಾನ್, ಕೆ.ಹೆಚ್.ಮುನಿಯಪ್ಪ, ಸಂಸದ ಸುನಿಲ್ ಬೋಸ್, ವಿಧಾನ ಪರಿಷತ್ ಸದಸ್ಯರಾದ ಡಾ.ಯತೀಂದ್ರ ಸಿದ್ದರಾಮಯ್ಯ,ತಿಮ್ಮಯ್ಯ, ಶಾಸಕರುಗಳಾದ ಪುಟ್ಟರಂಗಶೆಟ್ಟಿ, ಕೃಷ್ಣಮೂರ್ತಿ, ಅನಿಲ್ ಚಿಕ್ಕಮಾದು, ಗಣೇಶ್ ಪ್ರಸಾದ್, ಮಾಜಿ ಶಾಸಕರಾದ ನರೇಂದ್ರ, ಮಹಿಳಾ ಅಧ್ಯಕ್ಷೆ ಪುಷ್ಪಾ ಅಮರನಾಥ್, ಪಕ್ಷದ ಜಿಲ್ಲಾಧ್ಯಕ್ಷ ವಿಜಯಕುಮಾರ್ ಹಾಗೂ ಇತರೆ ಮುಖಂಡರು ಉಪಸ್ಥಿತರಿದ್ದರು.


Share this with Friends

Related Post