Mon. Dec 23rd, 2024

3.71 ಲಕ್ಷ ಕೋಟಿ ರೂ ಗಾತ್ರದ ಬಜೆಟ್ ಮಂಡಿಸಿದ ಸಿದ್ದು

Share this with Friends

ಬೆಂಗಳೂರು,ಫೆ.16: 2024-25ನೇ ಸಾಲಿನ ರಾಜ್ಯ ಬಜೆಟ್​ ಮಂಡಿಸುವ ಮೂಲಕ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ದಾಖಲೆ ಬರೆದಿದ್ದಾರೆ.

ರಾಹು ಕಾಲಕ್ಕೆ ಇನ್ನೂ ಹದಿನೈದು ನಿಮಿಷ ಇರುವಂತೆ ಬಜೆಟ್ ಪ್ರಾರಂಭಿಸಿದ ಸಿಎಂ,ಈ ಬಾರಿ 3.71 ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿದ್ದಾರೆ.

ಈ ಬಾರಿ ಸೂಟ್ ಕೇಸ್ ಕೈಬಿಟ್ಟು ಲಿಡಕರ್ ಬ್ಯಾಗನಲ್ಲಿ ಬಜೆಟ್ ಪುಸ್ತಕ ಇಟ್ಟುಕೊಂಡು ಬಂದಿದ್ದ ಮುಖ್ಯ ಮಂತ್ರಿಗಳು ಸದನಕ್ಕೆ ಆಗಮಿಸುತ್ತಿದ್ದಂತೆ ಎಲ್ಲರಿಗೂ ನಮಸ್ಕರಿಸಿ ಬಜೆಟ್ ಪುಸ್ತಕ ಓದಲು ಪ್ರಾರಂಭಿಸಿದರು.

ವಲಯವಾರು ವಿಂಗಡಣೆ ಮಾಡಿ ಮುಖ್ಯಮಂತ್ರಿ ಸಿದ್ಜರಾಮಯ್ಯ ಅವರು ಪ್ರಸಕ್ತ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ.

ಬಜೆಟ್​​ನ ಒಟ್ಟು ಗಾತ್ರ 3,71,383 ಕೋಟಿ ರೂ. ಎಂದು ತಿಳಿಸಿದ ಸಿಎಂ,
ಗ್ಯಾರಂಟಿ ಯೋಜನೆಗಳು ಕೇವಲ ಚುನಾವಣಾ ಗಿಮಿಕ್‌ ಅಲ್ಲ, 5 ಗ್ಯಾರಂಟಿ ಜಾರಿಯಿಂದ ಇಡೀ ಜಗತ್ತು ರಾಜ್ಯದತ್ತ ನೋಡುತ್ತಿದೆ.

ಶಕ್ತಿ ಯೋಜನೆಯಿಂದ ಮಹಿಳೆಯರು ಸಂತಸಗೊಂಡಿದ್ದಾರೆ. 5 ಗ್ಯಾರಂಟಿ ಜಾರಿಯಿಂದ ಸರ್ಕಾರದಲ್ಲಿ ಹಣವಿಲ್ಲ ಎಂದು ಸುಳ್ಳು ಹೇಳ್ತಿದ್ದಾರೆ. ಕೇಂದ್ರ ಸರ್ಕಾರ ಮಾಡದ್ದನ್ನು ನಾವು ಮಾಡಿದ್ದೇವೆ. ಬಿಟ್ಟಿ ಗ್ಯಾರಂಟಿ, ದಿವಾಳಿ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಎಲ್ಲರನ್ನೂ ಒಳಗೊಂಡಂತೆ ರಾಜ್ಯ ಅಭಿವೃದ್ಧಿ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಸಾಮಾಜಿಕ ನ್ಯಾಯ ಎನ್ನುವುದು ನಮ್ಮ ನಂಬಿಕೆ ಮಾತ್ರವಲ್ಲ; ಅದು ಉದಾತ್ತ ಜೀವನ ದೃಷ್ಟಿಕೋನ. ಸಮ ಸಮಾಜ ನಿರ್ಮಾಣದಲ್ಲಿ ಬಸವಾದಿ ಶರಣರ ಕಾಯಕ ಮತ್ತು ದಾಸೋಹ ತತ್ವಗಳು ನಮಗೆ ಪ್ರೇರಣೆಯಾಗಿದೆ.

ದುಡಿಮೆಯ ಒಂದು ಭಾಗವನ್ನು ದಾಸೋಹಕ್ಕೆ ಬಳಸಬೇಕೆಂಬ ಶರಣರ ಚಿಂತನೆ, ಸಮಾಜದಲ್ಲಿ ಸಂಪತ್ತಿನ ನ್ಯಾಯಯುತ ಹಂಚಿಕೆ ಮಾಡುವ ನಮ್ಮ ಆಶಯಕ್ಕೆ ಆಧಾರವಾಗಿದೆ ಎಂದು ‌ತಿಳಿಸಿದರು.

 ಆಗದು ಎಂದು; ಕೈಲಾಗದು ಎಂದು
    ಕೈಕಟ್ಟಿ ಕುಳಿತರೆ
    ಸಾಗದು ಕೆಲಸವು ಮುಂದೆ
    ಮನಸೊಂದಿದ್ದರೆ ಮಾರ್ಗವು ಉಂಟು
    ಕೆಚ್ಚೆದೆ ಇರಬೇಕೆಂದು...

ವರನಟ ಡಾ|| ರಾಜ್‌ಕುಮಾರ್‌ ಅಭಿನಯದ, ಆರ್.ಎನ್.ಜಯಗೋಪಾಲ್‌ ರಚನೆಯ ಬಂಗಾರದ ಮನುಷ್ಯ ಚಿತ್ರದ ಈ ಹಾಡಿನಂತೆ ದೇಶದ ಯಾವುದೇ ಸರ್ಕಾರ ಜಾರಿಗೊಳಿಸದ ಅತ್ಯಂತ ಬೃಹತ್‌ ಪ್ರಮಾಣದ ನೇರ ನೆರವು ನೀಡುವ ಗ್ಯಾರಂಟಿ ಯೋಜನೆಗಳನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಶ್ರೇಯ ನಮ್ಮದಾಗಿದೆ ಎಂದು ಸಿದ್ದು ತಿಳಿಸಿದರು.

ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ನಮ್ಮ ಯುಪಿಎ ಸರ್ಕಾರವು ಜನರ ಆಹಾರ, ಆರೋಗ್ಯ, ಶಿಕ್ಷಣ, ಉದ್ಯೋಗ ಮತ್ತು ವಾಸದ ಭದ್ರತೆಗಾಗಿ ವಿವಿಧ ಜನ ಕೇಂದ್ರಿತ ಯೋಜನೆಗಳು ಹಾಗೂ ಕಾನೂನುಗಳನ್ನು ರೂಪಿಸಿ ಬಡಜನರಿಗೆ ನ್ಯಾಯ ಒದಗಿಸುವ ಕಾರ್ಯಗಳನ್ನು ಕೈಗೊಂಡಿತ್ತು. ಆದರೆ, ಹಿಂದಿನ ೧೦ ವರ್ಷಗಳ ಅವಧಿಯಲ್ಲಿನ ಕೇಂದ್ರ ಸರ್ಕಾರದ ಜನವಿರೋಧಿ ನಿಲುವುಗಳಿಂದಾಗಿ ಅಸಮಾನತೆ ಹೆಚ್ಚಳವಾಯಿತು.

ಕೆಲವೇ ಜನರ ಬಳಿ ಸಂಪತ್ತಿನ ಶೇಖರಣೆ ಹಾಗೂ ಪಟ್ಟಭದ್ರ ಹಿತಾಸಕ್ತಿಗಳ ಹೆಚ್ಚುತ್ತಿರುವ ಪ್ರಭಾವ ಮುಂತಾದ ಅನಪೇಕ್ಷಿತ ಬೆಳೆವಣಿಗೆಗಳಿಗೆ ಎಡೆ ಮಾಡಿದೆ ಎಂದು ಹೇಳಿದರು.

ಅದಕ್ಕಾಗಿಯೇ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಂಡ ಕೇಂದ್ರ ಸರ್ಕಾರ ಮಾಡದ ಕೆಲಸವನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಂಡಿದೆ. ನಾವು ರೂಪಿಸಿದ ಗ್ಯಾರಂಟಿ ಯೋಜನೆಗಳು ಕೇವಲ ಚುನಾವಣಾ ಗಿಮಿಕ್‌ ಅಲ್ಲ. ಭಾರತ್‌ ಜೋಡೋ ಯಾತ್ರೆಯ ಸಂದರ್ಭದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಸಂಗ್ರಹಿಸಿದ ಜನಾಭಿಪ್ರಾಯದ ಫಲವಾಗಿದೆ.

ಇದು ಉದ್ಯೋಗ ಸೃಜಿಸಿ, ಜನರ ಕೊಳ್ಳುವ ಸಾಮರ್ಥ್ಯ ಹೆಚ್ಚಿಸುವ ಪ್ರಯತ್ನವಾಗಿದೆ. ನಿಷ್ಪಕ್ಷಪಾತ ಮತ್ತು ನ್ಯಾಯಯುತ ಸಮಾಜ ನಿರ್ಮಾಣಕ್ಕಾಗಿ ಸಂಪತ್ತಿನ ಮರುಹಂಚಿಕೆ ಮಾಡುವ ಕಾರ್ಯಕ್ರಮಗಳು ಇವಾಗಿವೆ ಎಂದು ಸಿಎಂ ತಿಳಿಸಿದರು.

ಸರ್ವೋದಯ ದೃಷ್ಟಿ ಮತ್ತು ಸಮನ್ವಯ ದೃಷ್ಟಿ ಎಲ್ಲೆಲ್ಲೂ ತಾಂಡವವಾಡಬೇಕು. ಮತ ಮತಗಳಲ್ಲಿ, ಸಾಹಿತ್ಯ ಸಾಹಿತ್ಯಗಳಲ್ಲಿ ಸಮಾಜ ಸಮಾಜಗಳಲ್ಲಿ, ಅಷ್ಟೇ ಏಕೆ ರಾಜಕೀಯ ಕ್ಷೇತ್ರದಲ್ಲಿ ಆರ್ಥಿಕ ಕ್ಷೇತ್ರದಲ್ಲಿ, ಸರ್ವತ್ರ ಅದು ವ್ಯಾಪಿಸಬೇಕು. ಅತ್ಯಂತ ಕೀಳಾದವನಿಗೂ ಮೇಲಾಗುವ ಅವಕಾಶವಾಗಬೇಕು. ಇವೆರಡನ್ನೂ ಒಳಗೊಂಡ ಆಧ್ಯಾತ್ಮಿಕ ದೃಷ್ಟಿಯೇ ಪೂರ್ಣದೃಷ್ಟಿ ಎಂಬ ರಾಷ್ಟ್ರಕವಿ ಕುವೆಂಪು ಅವರ ವಾಖ್ಯಗಳನ್ನು ಸಿದ್ದು ಈ ವೇಳೆ ಉಲ್ಲೇಖಿಸಿದರು.

10.15 ರಿಂದ 181 ಪುಟಗಳುಳ್ಳ ಬಜೆಟ್ ಪುಸ್ತಕವನ್ನು 3 ಗಂಟೆ 15 ನಿಮಿಷದ ತನಕ ಸಿದ್ದರಾಮಯ್ಯ ಅವರು ಯಾವುದೇ ಬ್ರೇಕ್ ತೆಗೆದುಕೊಳ್ಳದೆ ನಿರಂತರವಾಗಿ ಓದಿದ್ದು ವಿಶೇಷ.

ಇಲಾಖಾವಾರು ಅನುದಾನ:
ಶಿಕ್ಷಣ-44,422 ಕೋಟಿ
ಮಹಿಳಾ ಮತ್ತು ಮಕ್ಕಳ ಇಲಾಖೆ- 34,406 ಕೋಟಿ
ಇಂಧನ- 23,159 ಕೋಟಿ
ಗ್ರಾಮೀಣಾಭಿವೃದ್ಧಿ- 21,160 ಕೋಟಿ
ಒಳಾಡಳಿತ/ಸಾರಿಗೆ-19,777 ಕೋಟಿ
ನೀರಾವರಿ-19,179 ಕೋಟಿ
ನಗರಾಭಿವೃದ್ಧಿ-18,155 ಕೋಟಿ
ಕಂದಾಯ-16,170 ಕೋಟಿ
ಆರೋಗ್ಯ-15,145 ಕೋಟಿ
ಸಮಾಜಕಲ್ಯಾಣ-13,334 ಕೋಟಿ
ಲೋಕೋಪಯೋಗಿ-10,424 ಕೋಟಿ
ಆಹಾರ ಇಲಾಖೆ- 9963 ಕೋಟಿ
ಕೃಷಿ , ತೋಟಗಾರಿಕೆ- 6,688 ಕೋಟಿ
ಪಶು ಸಂಗೋಪನೆ, ಮೀನುಗಾರಿಕೆ- 3,307 ಕೋಟಿ
ಇತರೆ-1,24,593 ಕೋಟಿ ರೂ ಮೀಸಲಿರಿಸಲಾಗಿದೆ.


Share this with Friends

Related Post