Sat. Nov 2nd, 2024

ಅಂಗಾಂಗ ದಾನಿಗಳ ಕುಟುಂಬದವರಿಗೆ ಪ್ರಶಂಸಾ ಪತ್ರ ನೀಡಿ ದೈರ್ಯ ತುಂಬಿದ ಸಿದ್ದು

Share this with Friends

ಬೆಂಗಳೂರು, ಮಾ.1:ಅಂಗಾಂಗ ದಾನಿಗಳ ಕುಟುಂಬದವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಂಸಾ ಪತ್ರ ನೀಡಿ ಸಾಂತ್ವನ ಹಾಗೂ ಧೈರ್ಯ ಹೇಳಿದರು.

ಮುಖ್ಯಮಂತ್ರಿಯವರ ಅಧಿಕೃತ ನಿವಾಸ ಕಾವೇರಿ ಇಂದು ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಯಿತು.

ಅಪಘಾತಕ್ಕೀಡಾದ ಶರವಣ ಅವರ ಪತ್ನಿ, ಪ್ರಶಂಸಾ ಪತ್ರ ಸ್ವೀಕರಿಸುವಾಗ ಅಗಲಿದ ತಮ್ಮ ಪತಿಯನ್ನು ನೆನೆದು ದುಗುಡಗೊಂಡರು.

ಕೊಲೆಗೀಡಾದ ರಾಮನಗರದ ಕೆ.ಜಿ. ನವೀನ್‌ ಕುಟುಂಬದವರಿಗೆ ನವೀನ್ ಸಾವಿಗೆ ನ್ಯಾಯ ಒದಗಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.

ನೀವು ಕೈಗೊಂಡ ನಿರ್ಧಾರ ಸುಲಭವಲ್ಲ ಆದರೆ ಇತರರ ಜೀವ ಉಳಿಸುವ ಕೆಲಸ ನೀವು ಮಾಡಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿ,ಏನೇ ಸಂಕಷ್ಟ ಎದುರಾದರೂ ನಿಮ್ಮೊಂದಿಗೆ ನಾವಿದ್ದೇವೆ ಎಂದು ಸಿಎಂ ದೈರ್ಯ ತುಂಬಿದರು.

ತಮ್ಮ ಹಿಂದಿನ ಅವಧಿಯಲ್ಲಿ ಅಂಗಾಂಗ ದಾನಕ್ಕೆ ಸೊಸೈಟಿ ಸ್ಥಾಪಿಸಿದ್ದನ್ನು ಸ್ಮರಿಸಿದ ಸಿದ್ದರಾಮಯ್ಯ ಇನ್ನಷ್ಟು ಜನರು ಅಂಗಾಂಗ ದಾನಕ್ಕೆ ಮುಂದಾಗಬೇಕೆಂದು ಕರೆ ನೀಡಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ಮಾತನಾಡಿ, ಅಂಗಾಂಗ ದಾನ ಕೋರಿ, ನೋಂದಾಯಿಸಿಕೊಂಡವರ ಸಂಖ್ಯೆ 8000 ಕ್ಕೂ ಹೆಚ್ಚಿದೆ, ಕಳೆದ ಒಂದು ವರ್ಷದಲ್ಲಿ ಕೇವಲ 178 ಅಂಗಾಂಗ ದಾನ ನಡೆದಿದೆ. ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೆ ಇದು ಇನ್ನೂ ಹೆಚ್ಚಾಗಬೇಕು, ಈ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸಲು, ಅಂಗಾಂಗ ದಾನಿಗಳ ಕುಟುಂಬದವರಿಗೆ ಪ್ರಶಂಸಾ ಪತ್ರ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ಸಚಿವ ಚೆಲುವರಾಯಸ್ವಾಮಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್‌ ಕುಮಾರ್‌ ಹಾಗೂ ಆಯುಕ್ತ ಡಿ.ರಂದೀಪ್‌ ಮತ್ತಿತರರು‌ ಹಾಜರಿದ್ದರು.


Share this with Friends

Related Post