ಮೈಸೂರು,ಏ.8: ಮೈಸೂರಿನ ಕೇಂದ್ರ ಕಾರಾಗೃಹಕ್ಕೆ ದಾಖಲಿಸಲು ಕರೆತಂದ ವಿಚಾರಣಾಧೀನ ಖೈದಿಯ ಚಪ್ಪಲಿಯಲ್ಲಿ ಸಿಮ್ ಕಾರ್ಡ್, ಮೆಮೋರಿ ಕಾರ್ಡ್ ಪತ್ತೆಯಾಗಿದೆ.
ಅಲ್ಲದೆ ಆತನ ಪ್ಯಾಂಟ್ ಒಳಜೇಬಿನಲ್ಲೂ ಒಂದು ಸಿಮ್ ಕಾರ್ಡ್ ಪತ್ತೆಯಾಗಿರುವುದು ಜೈಲು ಅಧಿಕಾರಿಗಳೇ ಕಕ್ಕಾಬಿಕ್ಕಿಯಾದರು.
ದರೋಡೆ ಪ್ರಕರಣವೊಂದರಲ್ಲಿ ಸಿಕ್ಕಿಬಿದ್ದ ಆರೋಪಿಯನ್ನ ಕೇಂದ್ರ ಕಾರಾಗೃಹಕ್ಕೆ ದಾಖಲಿಸುವ ವೇಳೆ ಮುಖ್ಯ ಗೇಟ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗಳು ತಪಾಸಣೆಗೆ ಒಳಪಡಿಸಿದಾಗ ಆ ಖದೀಮನ ಬಣ್ಣ ಬಯಲಾಗಿದೆ.
ವಿಚಾರಣಾಧೀನ ಖೈದಿ ಕಿರಣ್ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾನೆ.ತಾನು ಧರಿಸಿದ್ದ ಚಪ್ಪಲಿಯ ಹೊಲಿಗೆಯನ್ನ ಬಿಡಿಸಿ ನಂತರ ಸಿಮ್ ಕಾರ್ಡ್ ಹಾಗೂ ಮೆಮೋರಿ ಕಾರ್ಡ್ ಇಟ್ಟು ಮತ್ತೆ ಹೊಲಿಗೆ ಹಾಕಿ ಕಾರಾಗೃಹ ಪ್ರವೇಶಿಸಿದ್ದ.
ಲಷ್ಕರ್ ಪೊಲೀಸ್ ಠಾಣೆಯಲ್ಲಿ ಕಿರಣ್ ವಿರುದ್ದ ದರೋಡೆ ಪ್ರಕರಣ ಆರೋಪವಿತ್ತು,ಆತನನ್ನು ಬಂಧಿಸಿದ ಲಷ್ಕರ್ ಠಾಣಾ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಲಾಗಿತ್ತು.
ಆರೋಪಿಯನ್ನ ಕಾರಾಗೃಹಕ್ಕೆ ದಾಖಲಿಸಲು ಲಷ್ಕರ್ ಠಾಣೆ ಸಿಬ್ಬಂದಿ ಚಿನ್ನಪ್ಪ ಕಲ್ಲೊಳ್ಳಿ ಹಾಗೂ ಮಂಜುನಾಥ್ ಕರೆತಂದಿದ್ದರು.
ಎಂಟ್ರಿ ಕೊಡುವಾಗ ನಿಯಮಾನುಸಾರ ತಪಾಸಣೆ ನಡೆಸುವ ವೇಳೆ ಕಿರಣ್ ಸಿಮ್ ಕಾರ್ಡ್ ಹಾಗೂ ಮೆಮೋರಿ ಕಾರ್ಡ್ ಚಪ್ಪಲಿಯಲ್ಲಿ ಮರೆಮಾಚಿ ತಂದಿರುವುದು ಗೊತ್ತಾಗಿದೆ.
ಕಾರಾಗೃಹ ಪೊಲೀಸರು
ಎರಡು ಸಿಮ್ ಕಾರ್ಡ್ ಹಾಗೂ ಒಂದು ಮೆಮೋರಿ ಕಾರ್ಡ್ ವಶಪಡಿಸಿಕೊಂಡಿದ್ದಾರೆ.
ಕಿರಣ್ ವಿರುದ್ದ ಮಂಡಿ ಪೊಲೀಸ್ ಠಾಣೆಯಲ್ಲಿ ಮತ್ತೆ ಪ್ರಕರಣ ದಾಖಲಾಗಿದೆ.