Mon. Dec 23rd, 2024

ಎಸ್ಐಟಿ ಕಾನೂನಿನಂತೆ ಕಾರ್ಯನಿರ್ವಹಿಸುತ್ತಿದೆ: ನಾವು ಮಧ್ಯ ಪ್ರವೇಶಿಸುವುದಿಲ್ಲ- ಸಿಎಂ

Share this with Friends

ಮೈಸೂರು, ಮೇ 10: ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಎಸ್ಐಟಿ ಕಾನೂನಿನಂತೆ ಕಾರ್ಯನಿರ್ವಹಿಸುತ್ತದೆ ಇದರಲ್ಲಿ ನಾವ್ಯಾರೂ ಮಧ್ಯ ಪ್ರವೇಶಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಮೈಸೂರು ವಿಮಾನ ನಿಲ್ದಾಣದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ,ಈ ಪ್ರಕರಣದಲ್ಲಿ ನಾನಾಗಲಿ ಡಿ.ಕೆ ಶಿವಕುಮಾರ್ ಆಗಲಿ ಮಧ್ಯ ಪ್ರವೇಶ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಎಸ್ಐಟಿ ಸತ್ಯಾ ಸತ್ಯತೆಯನ್ನು ಹೊರತರಲಿ ಎಂಬ ಉದ್ದೇಶದಿಂದ ರಚಿಸಲಾಗಿದೆ. ಅದು ಕಾನೂನಿನಂತೆ ಕೆಲಸ ನಿರ್ವಹಿಸುತ್ತದೆ ಯಾರು ಸಹ ಇದರಲ್ಲಿ ಮಧ್ಯ ಪ್ರವೇಶಿಸಿಲ್ಲ ಎಂದು ಹೇಳಿದರು.

ಮಾಜಿ ಸಚಿವ ರೇವಣ್ಣ ಪ್ರಕರಣದಲ್ಲಿ ರಾಜಕೀಯ ಹಸ್ತಕ್ಷೇಪ ಆಗಿಲ್ಲ,ರೇವಣ್ಣ ಅವರನ್ನು ರಾಜಕೀಯ ಹಿನ್ನೆಲೆಯಲ್ಲಿ ಬಂಧಿಸಿಲ್ಲ ಎಂದು ಸಿದ್ದು ಹೇಳಿದರು.

ಈಗಾಗಲೇ ಡಿ.ಕೆ. ರವಿ, ಲಾಟರಿ ಕೇಸ್, ಜಾರ್ಜ್ ಕೇಸ್ ಗಳನ್ನು ಸಿಬಿಐಗೆ ವಹಿಸಲಾಗಿತ್ತು. ಆದರ ಫಲಿತಾಂಶ ಏನು ಎಂಬುದು ತಿಳಿದಿದೆಯಲ್ಲವೆ ಎಂದು ಸಿಎಂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನನಗೆ ಸಿಬಿಐ ಮೇಲೆ ನಂಬಿಕೆ ಇಲ್ಲಾ ಅಂತಲ್ಲಾ ನಮ್ಮ ರಾಜ್ಯದ ಪೊಲೀಸರೇ ಸಮರ್ಥರಾಗಿದ್ದಾರೆ ಹಾಗಾಗಿ ಎಸ್ಐಟಿಯನ್ನು ರಚಿಸಿದ್ದೇವೆ ಎಂದು ಸಿದ್ದು ತಿಳಿಸಿದರು.

ಪೆನ್ ಡ್ರೈವ್ಗಳನ್ನು ಹೊರದೇಶಗಳಲ್ಲಿ ಮಾಡಿಸಲಾಗಿದೆ ಹಾಗಾಗಿ ರಾಜ್ಯದ ಎಸ್ಐಟಿ ಅಲ್ಲಿಗೆ ಹೋಗಿ ತನಿಖೆ ನಡೆಸಲು ಅಸಾಧ್ಯ ಆದ್ದರಿಂದ ಸಿಬಿಐಗೆ ವಹಿಸಿ ಎಂದು ವಿಪಕ್ಷಗಳು ಒತ್ತಾಯ ಮಾಡುತ್ತಿವೆಯಲ್ಲಾ ಎಂಬ ಪ್ರಶ್ನೆಗೆ, ಅವರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಹಾಗಾಗಿ ಈ ಪ್ರಕರಣವನ್ನು ರಾಜ್ಯದ ಪೊಲೀಸರೇ ಸಮರ್ಥವಾಗಿ ನಿಭಾಯಿಸಲಿದ್ದಾರೆ ಎಂದು ಸಿದ್ದರಾಮಯ್ಯ ಪುನರುಚ್ಚರಿಸಿದರು.

ಈ ಹಿಂದೆ ಬಿಜೆಪಿಯವರು ಒಂದು ಕೇಸನ್ನೂ ಸಿಬಿಐಗೆ ವಹಿಸಿಲ್ಲ. ಅವರು ಸಿಬಿಐಯನ್ನು ಕರೆಕ್ಪ್ಷನ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಅನ್ನುತ್ತಿದ್ದರು. ದೇವೇಗೌಡರು ಚೋರ್ ಬಚಾವೋ ಸಂಸ್ಥೆ ಎಂದು ಹೇಳುತ್ತಿದ್ದರು. ಈಗ ನೋಡಿದರೆ ಸಿಬಿಐಗೆ ಈ ಪ್ರಕರಣ ವಹಿಸಿ ಎನ್ನುತ್ತಿದ್ದಾರಲ್ಲ ಎಂದು ಸಿಎಂ ಮರು ಪ್ರಶ್ನಿಸಿದರು.

ಎಸ್ಐಟಿ ಮೇಲೆ ನನಗೆ ನಂಬಿಕೆ ಇದೆ ಎಂದ ಮುಖ್ಯಮಂತ್ರಿಗಳು ಎಸ್ಐಟಿ ಸರಿಯಾದ ಹಾದಿಯಲ್ಲಿ ತನಿಖೆ ನಡೆಸುತ್ತಿದೆ, ಯಾವತ್ತೂ ಪೊಲೀಸರಿಗೆ ಕಾನೂನು ವಿರುದ್ಧ ತನಿಖೆ ಮಾಡಿ ಎಂದು ಹೇಳುವುದಿಲ್ಲ ನಂಬಿಕೆ ಇರಬೇಕು ಎಂದು ಹೇಳಿದರು.

ಎಸ್ ಎಸ್ ಎಲ್ ಸಿಯಲ್ಲಿ ಮೋರಾರ್ಜಿ ಶಾಲೆಯ ವಿದ್ಯಾರ್ಥಿನಿ ರಾಜ್ಯಕ್ಕೆ ಮೊದಲ ಸ್ಥಾನ ಬಂದಿದ್ದಾರೆ,ಆ‌ ಬಾಲಕಿಗೆಅಭಿನಂದನೆ ಸಲ್ಲಿಸುತ್ತೇವೆ ಎಂದು ಇದೇ ವೇಳೆ ಸಿದ್ದರಾಮಯ್ಯ ತಿಳಿಸಿದರು.

ಉತ್ತಮ ಶಿಕ್ಷಣ ಸಿಗುವ ಉದ್ದೇಶದಿಂದ ಮೋರಾರ್ಜಿ ದೇಸಾಯಿ ಶಾಲೆ ತೆಗೆಯಲಾಗಿದೆ,ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು,ಅದಕ್ಕಾಗಿ ಪ್ರತಿ ಹೋಬಳಿಗೆ ಒಂದೊಂದು ವಸತಿ ಶಾಲೆ ತೆಗೆದಿದ್ದೇವೆ‌ ಎಂದು ಸಿದ್ದು ತಿಳಿಸಿದರು.

ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಬಸವಣ್ಣನವರ ಜಯಂತಿಯ ದಿನವಾದ ಇಂದು ಸರ್ಕಾರಿ ಕಾರ್ಯಕ್ರಮವನ್ನು ಆಯೋಜಿಸಿಲ್ಲ. ಹಾಗಾಗಿ ನಾನು ಕೇವಲ ಬಸವಣ್ಣನವರ ಪುತ್ತಳಿಗೆ ಮಾಲಾರ್ಪಣೆ ಮಾಡುತ್ತೇನೆ ಎಂದು ತಿಳಿಸಿದರು.

ನಂತರ ಏರ್ಪೋರ್ಟ್ ನಿಂದ ಹೊರಟ ಸಿಎಂ ಸಿದ್ದರಾಮಯ್ಯ ಅವರು ಗನ್ ಹೌಸ್ ಬಳಿ ಇರುವ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.


Share this with Friends

Related Post