ಬೆಂಗಳೂರು:ಹೆಣ್ಣು ಭ್ರೂಣ ಹತ್ಯೆ ತಡಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದೆಯಾದರೂ ಪೂರ್ಣ ಪ್ರಮಾಣದಲ್ಲಿ ಹೆಣ್ಣು ಭ್ರೂಣ ಹತ್ಯೆ ತಡೆಯಲು ಸಾಮಾಜಿಕ ಜಾಗೃತಿಯೂ ಬಹಳ ಮುಖ್ಯ,ಹೆಣ್ಣುಭ್ರೂಣ ಹತ್ಯೆ ಮಾಡದಿರಿ, ಮಾಡಲು ಬಿಡದಿರಿ. ಈ ಸಾಮಾಜಿಕ ಪಿಡುಗನ್ನು ಬೇರುಸಮೇತ ನಾಶ ಪಡಿಸಲು ನಮ್ಮೊಂದಿಗೆ ಕೈ ಜೋಡಿಸಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕರೆ ನೀಡಿದರು.
ಆರೋಗ್ಯ ಇಲಾಖೆಯಲ್ಲಿ ನಡೆದ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,ಇಂದು ಹೆಣ್ಣುಮಕ್ಕಳು ಅಸಾಧ್ಯವಾದುದನ್ನು ಸಾಧ್ಯವಾಗಿಸಿ ಎಲ್ಲಾ ರಂಗಗಳಲ್ಲೂ ಮುಂಚೂಣಿಯಲ್ಲಿದ್ದಾರೆ. ಬಾಹ್ಯಾಕಾಶದಿಂದ ಹಿಡಿದು ದೇಶದ ರಕ್ಷಣೆಯವರೆಗೆ, ಕ್ರೀಡೆಯಿಂದ ಹಿಡಿದು ಆರೋಗ್ಯ ಕ್ಷೇತ್ರದವರೆಗೆ ಹೆಣ್ಣುಮಕ್ಕಳ ಸಾಧನೆ ನಮಗೆಲ್ಲರಿಗೂ ಹೆಮ್ಮೆ ತರುವಂತದ್ದು. ಅದರಲ್ಲೂ ಮನೆ ಒಳಗೆ-ಹೊರಗೆ ಎಲ್ಲಾ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವ ವಿಚಾರದಲ್ಲಿ ಹೆಣ್ಣುಮಕ್ಕಳಿಗೆ ಸರಿಸಾಟಿಯಿಲ್ಲ. ನಮ್ಮ ಆರೋಗ್ಯ ಇಲಾಖೆಯಲ್ಲೇ ಶೇ. 60 ರಷ್ಟು ಮಹಿಳಾ ಸಿಬ್ಬಂದಿಗಳು ದಕ್ಷತೆಯಿಂದ ಕೆಲಸ ಮಾಡುತ್ತಿರುವುದು ಅವರ ಕೌಶಲ್ಯ, ಬದ್ಧತೆಗೆ ಸಾಕ್ಷಿ.ಆದರೆ, ಹೆಣ್ಣುಮಕ್ಕಳು ಇಷ್ಟೊಂದು ಎತ್ತರಕ್ಕೆ ಬೆಳೆಯುತ್ತಿರುವ ಈ ಕಾಲದಲ್ಲೂ, ಅಲ್ಲಲ್ಲಿ ಹೆಣ್ಣು ಭ್ರೂಣಹತ್ಯೆ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದಾಗ ನನಗೆ ತುಂಬಾ ನೋವಾಗುತ್ತದೆ. ಒಂದು ಜೀವ ಅರಳುವ ಮುನ್ನವೇ ಗರ್ಭದಲ್ಲೇ ಚಿವುಟಿ ಹಾಕುವ ಕ್ರೌರ್ಯ ನಾಗರಿಕ ಸಮಾಜಕ್ಕೆ ದೊಡ್ಡ ಕಳಂಕ ಎಂದರು.
ಈ ಸಾಮಾಜಿಕ ಪಿಡುಗನ್ನು ಬುಡಸಮೇತ ಕಿತ್ತೊಗೆಯಲು ನಮ್ಮ ಸರ್ಕಾರ, ಭ್ರೂಣಹತ್ಯೆ ತಡೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿದೆ. ಈ ಅಕ್ರಮದ ಬಗ್ಗೆ ಮಾಹಿತಿ ನೀಡುವ ಜಾಗೃತ ನಾಗರಿಕರಿಗೆ ₹1 ಲಕ್ಷ ಬಹುಮಾನ ನೀಡಲಾಗುತ್ತಿದೆ. ಈಗಾಗಲೇ ಇಬ್ಬರು ಧೈರ್ಯವಂತರು ಮಾಹಿತಿ ನೀಡಿ ಹೆಣ್ಣು ಜೀವಗಳನ್ನು ಉಳಿಸಿ ಈ ಬಹುಮಾನ ಪಡೆದಿದ್ದಾರೆ.ಹೆಣ್ಣುಭ್ರೂಣ ಹತ್ಯೆ ತಡೆಗೆ ಸಾಮಾಜಿಕವಾಗಿ, ಕೌಟುಂಬಿಕವಾಗಿ ಒಳಗೊಳ್ಳುವುದು ಅತಿಮುಖ್ಯ. ಇಂದೇ ಪಣತೋಡಿ ಹೆಣ್ಣುಭ್ರೂಣ ಹತ್ಯೆ ಮಾಡದಿರಿ, ಮಾಡಲು ಬಿಡದಿರಿ. ಈ ಸಾಮಾಜಿಕ ಪಿಡುಗನ್ನು ಬೇರುಸಮೇತ ನಾಶ ಪಡಿಸಲು ನಮ್ಮೊಂದಿಗೆ ಕೈ ಜೋಡಿಸಿ ಎಂದು ಕರೆ ನೀಡಿದರು.
ಹೆಣ್ಣು ಭ್ರೂಣ ಹತ್ಯೆ ತಡಗಟ್ಟುವಲ್ಲಿ ನಮ್ಮ ಇಲಾಖೆ ಗಮನಾರ್ಹ ಕಾರ್ಯ ಮಾಡಿದೆ. ಕಟ್ಟುನಿಟ್ಟಿನ ಕಾನೂನು ರೂಪಿಸಿದೆ. ಪ್ರಸಕ್ತ 1000:947 ಪುರುಷ, ಸ್ತ್ರೀ ಅನುಪಾತ ಇದೆ. ಇದನ್ನು ಸರಿಪಡಿಸದಿದ್ದರೆ, ಸಾಮಾಜಿಕ ಸಮಸ್ಯೆ ಉಂಟಗುತ್ತದೆ.ಕೇವಲ ಕಾನೂನು ಕ್ರಮಗಳಿಂದ ಮಾತ್ರವಲ್ಲದೇ, ಸಾಮಾಜಿಕ ಜಾಗೃತಿಯೂ ಮುಖ್ಯ. ಎಷ್ಟೋ ಕಡೆ ಹೆಣ್ಣುಮಕ್ಕಳೇ ಈ ಕೆಟ್ಟ ಕಾರ್ಯದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಇದು ಆಗಬಾರದು,ಹೆಣ್ಣು ಭ್ರೂಣ ಹತ್ಯೆ ಸಂಪೂರ್ಣವಾಗಿ ನಿಲ್ಲಲು ಎಲ್ಲರೂ ಸಹಕಾರ ನೀಡಬೇಕು ಎಂದು ಕರೆ ನೀಡಿದರು.
ಹೆಣ್ಣು ಮಕ್ಕಳಿಗೆ ಗೌರವ, ಮಾನ್ಯತೆ ನೀಡಬೇಕಾದದ್ದು ನಮ್ಮ ಕರ್ತವ್ಯ. ಇಂದು ಹೆಣ್ಣು ಎಲ್ಲ ರಂಗದಲ್ಲಿಯೂ ಸಕ್ರಿಯವಾಗಿ ಭಾಗವಹಿಸುತ್ತಿದ್ದಾಳೆ ಎನ್ನುವುದು ಅತ್ಯಂತ ಸಂತಸದ ವಿಷಯ. ಸಮಾಜದಲ್ಲಿ ಇನ್ನೂ ಬದಲಾವಣೆ ಆಗಬೇಕಾದ ಅಗತ್ಯ ಇದೆ.ಹೆಣ್ಣಿಗೆ ಸ್ವಾವಲಂಬನೆ, ಸ್ವಾತಂತ್ರ್ಯ ನೀಡಲು ನಾವು ಅವರನ್ನು ಬೆಂಬಲಿಸುತ್ತಾ, ಅವರ ಭವಿಷ್ಯ ಉಜ್ವಲಗೊಳಿಸೋಣ ಎಂದರು.
ರಾಷ್ಟ್ರೀಯ ಬಾಲ ಸ್ವಾಸ್ಥ್ಯ (RBSK)ಕಾರ್ಯಕ್ರಮದಡಿಯಲ್ಲಿ 6 ವರ್ಷದೊಳಗಿನ ಅಂಗನವಾಡಿ ಕೇಂದ್ರಗಳಲ್ಲಿನ ಮಕ್ಕಳು ಹಾಗೂ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲಾ-ಕಾಲೇಜುಗಳಲ್ಲಿ 1 ರಿಂದ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಆರ್‌ಬಿಎಸ್‌ಕೆ ಮೊಬೈಲ್ ಹೆಲ್ತ್ ತಂಡಗಳ ಮುಖಾಂತರ ಉಚಿತವಾಗಿ ಆರೋಗ್ಯ ತಪಾಸಣೆಯನ್ನು ನಡೆಸಲಾಗಿದ್ದು,2025-26ನೇ ಸಾಲಿಗೆ ಏಪ್ರಿಲ್ ನಿಂದ ಡಿಸೆಂಬರ್ ವರೆಗೆ ಒಟ್ಟು 52,02,647 ಹೆಣ್ಣು ಮಕ್ಕಳ ಆರೋಗ್ಯ ತಪಾಸಣೆಯನ್ನು ನಡೆಸಿದ್ದೇವೆ ಎಂದರು.
ʼಶುಚಿʼ ಕಾರ್ಯಕ್ರಮದಡಿಯಲ್ಲಿ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲಾ-ಕಾಲೇಜುಗಳಲ್ಲಿನ 6 ರಿಂದ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹೆಣ್ಣುಮಕ್ಕಳಿಗೆ ಹಾಗೂ ವಸತಿ ನಿಲಯಗಳಲ್ಲಿನ (ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, KREIS, ಪರಿಶಿಷ್ಟ ಪಂಗಡ ಇಲಾಖೆ) ಒಟ್ಟು 19,64,507 ಹೆಣ್ಣುಮಕ್ಕಳಿಗೆ ಉಚಿತವಾಗಿ ಸ್ಯಾನಿಟರಿ ನ್ಯಾಪ್‌ಕಿನ್ ಪ್ಯಾಡ್‌ಗಳನ್ನು ಒದಗಿಸಿದ್ದೇವೆ. ʼಮುಟ್ಟಿನ ಕಪ್ʼ ಯೋಜನೆಯಡಿಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಸರ್ಕಾರಿ, ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ಒಟ್ಟು 9,44,466 ಹೆಣ್ಣುಮಕ್ಕಳಿಗೆ ಮುಟ್ಟಿನ ಕಪ್ ಅನ್ನು ಒದಗಿಸಲು ಇಲಾಖೆ ಸಜ್ಜಾಗಿದೆ ಎಂದರು.
ಗರ್ಭಕಂಠದ ಕಾನ್ಸರ್ ವಿರುದ್ಧ ಆರೋಗ್ಯ ಇಲಾಖೆ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದು ಕಲ್ಯಾಣ ಕರ್ನಾಟಕ ಮತ್ತು ಸುತ್ತಮುತ್ತಲ ಭಾಗದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ಒಂದು ಲಕ್ಷಕ್ಕೂ ಅಧಿಕ 14 ವರ್ಷದ ಹೆಣ್ಣುಮಕ್ಕಳಿಗೆ HPV ಲಸಿಕೆ ನೀಡಲಾಗುತ್ತದೆ. ಈ ಯೋಜನೆಯನ್ನು ಸದ್ಯದಲ್ಲಿಯೇ ರಾಜ್ಯಾದ್ಯಂತ ವಿಸ್ತರಿಸಲಾಗುವುದು. ಗರ್ಭಕಂಠ ಕಾನ್ಸರ್ ನಿರ್ಮೂಲನೆ ಮಾಡುವುದು ನಮ್ಮ ಆದ್ಯತೆಯ ಕಾರ್ಯಕ್ರಮಗಳಲ್ಲೊಂದಾಗಿದೆ ಎಂದರು.

