ಬೆಂಗಳೂರು, ಮೇ.22: ಮಳೆಗಾಲ ಮುಗಿಯೋ ಮುಂಚೆ ಸಮಸ್ಯೆಗೆ ಶಾಶ್ವತ ಪರಿಹಾರ ಆಗಲೇಬೇಕು ಇಲ್ಲದಿದ್ದರೆ ಸಸ್ಪೆಂಡ್ ಆಗ್ತೀರ ಹುಷಾರ್ ಎಂದು ಚೀಫ್ ಎಂಜಿನಿಯರ್ ಗೆ ಸಿಎಂ ಸಿದ್ದರಾಮಯ್ಯ ಕಡಕ್ ಎಚ್ಚರಿಕೆ ನೀಡಿದರು.
ಬೆಂಗಳೂರಿನಲ್ಲಿ ಒಂದು ಸಾದಾರಣ ಮಳೆಗೂ ಬಹಳಷ್ಟು ಪ್ರದೇಶಗಳಲ್ಲಿ ಅನಾಹುತಗಳಾಗಿ ಜನರು ಹೈರಾಣಾಗಿದ್ದಾರೆ
ಹಾಗಾಗಿ ಬುಧವಾರ ಬೆಳಗಿನಿಂದಲೇ ಸಿಟಿ ರೌಂಡ್ಸ್ ಹಮ್ಮಿಕೊಂಡ ಸಿಎಂ ಮಳೆಯಿಂದ ಸಮಸ್ಯೆಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಕೈಗೊಂಡಿರುವ ಕಾಮಗಾರಿ ಮತ್ತು ಮಳೆಯಿಂದ ಸಮಸ್ಯೆಗಳಿಗೆ ಒಳಗಾಗುವ ಪ್ರದೇಶಗಳಿಗೆ ಭೇಟಿ ನೀಡಿದ ಸಿದ್ದರಾಮಯ್ಯ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಗಾಳಿ ಆಂಜನೇಯ ದೇವಸ್ಥಾನ ಸಮೀಪದ ರಾಜಕಾಲುವೆಯಲ್ಲಿ ಮಳೆಗಾಲದಲ್ಲಿ ಸದಾ ಪ್ರವಾಹ ಉಂಟಾಗಿ ದೇವಾಲಯಕ್ಕೆ ನೀರು ನುಗ್ಗುತ್ತದೆ,ಹಾಗಾಗಿ ಅಲ್ಲಗೇ ಸಿಎಂ ಮೊದಲು ಭೇಟಿ ಮಾಡಿದರು.
ಇದಕ್ಕೆ ಸಮಾನಾಂತರವಾಗಿ ಇನ್ನೊಂದು ಕಾಲುವೆ ನಿರ್ಮಿಸುವುದರಿಂದ ಪ್ರವಾಹ ತಗ್ಗಿಸಬಹುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಈ ವೇಳೆ ಮುಖ್ಯಮಂತ್ರಿಗಳಿಗೆ ವಿವರಿಸಿದರು.
ಪ್ರವಾಹ ನಿಯಂತ್ರಣ ಕಾಮಗಾರಿಗೆ 11.5 ಕೋಟಿ ರೂ. ಅಂದಾಜು ವೆಚ್ಚದ ಯೋಜನೆ ರೂಪಿಸಲಾಗಿದ್ದು, ಈ ಕಾಮಗಾರಿಯನ್ನು ತಕ್ಷಣ ಕೈಗೆತ್ತಿಕೊಳ್ಳಬೇಕೆಂದು ಸೂಚಿಸಿದರು.ಅಲ್ಲದೆ ಈ ರಾಜಕಾಲುವೆಗೆ ಸಾರ್ವಜನಿಕರು ಕಸ ಎಸೆಯುವುದನ್ನು ತಡೆ ಗಟ್ಟಲು ಕ್ರಮ ವಹಿಸುವಂತೆ ಆದೇಶಿಸಿದರು.
ಮಳೆಗಾಲ ಮುಗಿಯೋದರೊಳಗೆ ಸಮಸ್ಯೆಯನ್ನು ಪೂರ್ಣಗೊಳಿಸಬೇಕೆಂದು ಬಿಬಿಎಂಪಿ ಆಯುಕ್ತರಿಗೆ ಸಿದ್ದರಾಮಯ್ಯ ಕಡಕ್ ಆದೇಶ ನೀಡಿದರು.