ಜೈಪುರ,ಫೆ.14: ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜ್ಯಸಭಾ ಚುನಾವಣೆಗೆ ರಾಜಸ್ಥಾನದಿಂದ ನಾಮಪತ್ರ ಸಲ್ಲಿಸಿದ್ದಾರೆ.
ದೆಹಲಿಯಿಂದ ಹೊರಟ ಅವರು ನೇರವಾಗಿ ಜೈಪುರದಲ್ಲಿರುವ ವಿಧಾನಸಭೆಗೆ ತೆರಳಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳಿಸಿದರು.
ಈ ವೇಳೆ ಅವರ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಹಾಜರಿದ್ದರು.
ಐದು ಅವಧಿಗೆ ಉತ್ತರ ಪ್ರದೇಶದ ರಾಯ್ ಬರೇಲಿಯಿಂದ ಲೋಕಸಭೆ ಸಂಸದರಾಗಿ ಸೇವೆ ಸಲ್ಲಿಸಿದ ಸೋನಿಯಾ ಗಾಂಧಿ ಇದೇ ಮೊದಲ ಬಾರಿಗೆ ರಾಜ್ಯಸಭೆಗೆ ಸ್ಪರ್ಧಿಸುತ್ತಿದ್ದಾರೆ.
2019 ರಲ್ಲೇ ಅವರು ಇದು ಕೊನೆಯ ಲೋಕಸಭೆ ಚುನಾವಣೆ ಎಂದು ಘೋಷಿಸಿದ್ದರು.
ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ 1999 ರಲ್ಲಿ ಮೊದಲ ಬಾರಿಗೆ ಅವರು ಲೋಕಸಭೆಗೆ ಆಯ್ಕೆಯಾದರು.
ರಾಜ್ಯಸಭೆಗೆ ಆಯ್ಕೆಯಾಗುತ್ತಿರುವ ಗಾಂಧಿ ಕುಟುಂಬದ ಎರಡನೇ ಸದಸ್ಯೆ ಸೋನಿಯಾ ಗಾಂಧಿ. ಇದಕ್ಕೂ ಮೊದಲು ಆಗಸ್ಟ್ 1964 ರಿಂದ ಫೆಬ್ರವರಿ 1967 ರವರೆಗೆ ಇಂದಿರಾ ಗಾಂಧಿ ರಾಜ್ಯಸಭೆಯಲ್ಲಿದ್ದರು.
ತೆಲಂಗಾಣ, ಕರ್ನಾಟಕದಿಂದ ಸ್ಪರ್ಧೆ ಮಾಡುವಂತೆ ಸೋನಿಯಾ ಗಾಂಧಿ ಅವರಿಗೆ ರಾಜ್ಯ ನಾಯಕರು ಮನವಿ ಮಾಡಿದ್ದರು.
ಆದರೆ ರಾಹುಲ್ ಗಾಂಧಿ ಕೇರಳದ ವಯನಾಡ್‌ನಿಂದ ಸಂಸದರಾಗಿರುವ ಕಾರಣ ಉತ್ತರ ಭಾರತವನ್ನು ಪ್ರತಿನಿಧಿಸುವ ದೃಷ್ಠಿಯಿಂದ ಸೋನಿಯಾ ಗಾಂಧಿ ರಾಜಸ್ಥಾನದಿಂದ ರಾಜ್ಯಸಭೆಗೆ ಆಯ್ಕೆಯಾಗಲು ನಿರ್ಧರಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ
ಸೋನಿಯಾ ಗಾಂಧಿ ರಾಜ್ಯಸಭೆ ಆಯ್ಕೆಯಿಂದಾಗಿ ಅವರು ಪ್ರತಿನಿಧಿಸುವ ರಾಯ್ ಬರೇಲಿಯಿಂದ ಪುತ್ರಿ ಪ್ರಿಯಾಂಕಾ ಗಾಂಧಿ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಕಾಂಗ್ರೆಸಿಗರು ಹೇಳುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಸೋನಿಯಾ ಗಾಂಧಿ ಅವರು ರಾಜಸ್ಥಾನವನ್ನು ತಮ್ಮ ರಾಜ್ಯಸಭಾ ಕ್ಷೇತ್ರವನ್ನಾಗಿ ಆಯ್ಕೆ ಮಾಡುವುದರಿಂದ ಪಕ್ಷದ ಕಾರ್ಯಕರ್ತರು ಮತ್ತು ಜನರಿಗೆ ಸಕಾರಾತ್ಮಕ ಸಂದೇಶ ರವಾನಿಸಿದಂತಾಗುತ್ತದೆ ಎಂದು ಹೇಳಿದ್ದಾರೆ.
ರಾಜಸ್ಥಾನವನ್ನು ಆರಿಸಿರುವುದು ಸೋನಿಯಾ ಗಾಂಧಿಯವರ ಆಯ್ಕೆಯಾಗಿದೆ. ಇದಕ್ಕಾಗಿ ನಾವೆಲ್ಲರೂ ಬಹಳ ಹೆಮ್ಮೆಪಡುತ್ತೇವೆ ಎಂದು ತಿಳಿಸಿದ್ದಾರೆ.