ಬೆಂಗಳೂರು: ಏಪ್ರಿಲ್ ನಿಂದ ಡಿಸೆಂಬರ್ ವರೆಗೆ ನೈಋತ್ಯ ರೈಲ್ವೆಯ ಆದಾಯ ಕಳೆದ ಸಾಲಿಗೆ ಹೋಲಿಸಿದಲ್ಲಿ ಶೇ.16 ರಷ್ಟು ಹೆಚ್ಚಾಗಿದ್ದು,ಹಬ್ಬ,ಸರಣಿ ರಜೆಗಳ ಕಾರಣದಿಂದ ಕಾರ್ಯಾಚರಿಸಿದ ವಿಶೇಷ ರೈಲುಗಳಿಂದಲೂ ಹೆಚ್ಚಿನ ಆದಾಯ ಬಂದಿದೆ ಎಂದು ಬೆಂಗಳೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಆಶುತೋಷ್‌ಕುಮಾರ್ ಸಿಂಗ್ ತಿಳಿಸಿದ್ದಾರೆ.
ಬೆಂಗಳೂರಿನ ಎಂಜಿ ಕಾಲೋನಿ ರೈಲ್ವೆ ಮೈದಾನದಲ್ಲಿ ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗವು 77 ನೇ ಗಣರಾಜ್ಯೋತ್ಸವವನ್ನು ಆಚರಿಸಿತು. ಬೆಂಗಳೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಆಶುತೋಷ್‌ಕುಮಾರ್ ಸಿಂಗ್ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ರೈಲ್ವೆ ರಕ್ಷಣಾ ಪಡೆ, ವಿದ್ಯಾರ್ಥಿಗಳು ಮತ್ತು ಸ್ಕೌಟ್ಸ್ ಗೈಡ್ಸ್‌ನ ತುಕಡಿಗಳನ್ನು ಒಳಗೊಂಡ ಪರೇಡ್‌ಅನ್ನು ಪರಿಶೀಲಿಸಿದರು.
ನಂತರ ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರ ಗಣರಾಜ್ಯೋತ್ಸವ ದಿನದ ಸಂದೇಶವನ್ನು ಓದಿದ ಅವರು,2025 ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ, ನೈಋತ್ಯ ರೈಲ್ವೆಯ ಒಟ್ಟು ಆದಾಯ ₹6,939 ಕೋಟಿ ಗಳಾಗಿದ್ದು ಇದು ಕಳೆದ ವರ್ಷಕ್ಕಿಂತ 16% ಹೆಚ್ಚಾಗಿದೆ. ಪ್ರಯಾಣಿಕರ ಆದಾಯ ₹2,543 ಕೋಟಿ ಹಾಗೂ ಸರಕು ಸಾಗಣೆ ಆದಾಯವು ₹3,976 ಕೋಟಿ ಗಳಾಗಿದೆ ಎಂದು ಹೇಳಿದರು.
ಹಬ್ಬದ ಋತುಗಳಲ್ಲಿ, ಪ್ರಯಾಣಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೆಯು ವಿವಿದ ರೈಲುಗಳಿಗೆ 614 ಹೆಚ್ಚುವರಿ ಬೋಗಿಗಳನ್ನು ಅಳವಡಿಸಿತು, ಹಾಗೆಯೇ 481 ವಿಶೇಷ ರೈಲುಗಳನ್ನು ಓಡಿಸಿತು. ಇದರಿಂದ ನೈರುತ್ಯ ರೈಲ್ವೆಯು ₹232 ಕೋಟಿ ಹೆಚ್ಚುವರಿ ಆದಾಯ ಗಳಿಸಿತು ಎಂದರು.
ಕೆರೈಡ್ನ 3.5 ಕಿ.ಮೀ. ಜೋಡಿ ಮಾರ್ಗ ಕಾಮಗಾರಿಯೂ ಸೇರಿದಂತೆ ಒಟ್ಟು 26 ಕಿ.ಮೀ. ಜೋಡಿಮಾರ್ಗವನ್ನು ಕಾರ್ಯ ನಿಯೋಜನೆಗೊಳಿಸಲಾಗಿದೆ. ಮಕ್ಕಾಜಿಪಲ್ಲಿ-ಧರ್ಮಾವರಂ ಜೋಡಿ ಮಾರ್ಗದಲ್ಲಿ ಲೋಕೋಮೋಟಿವ್‌ನ ಪರೀಕ್ಷಾರ್ಥ ಸಂಚಾರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಒಟ್ಟು 360 ಟ್ರ್ಯಾಕ್ ಕಿಲೋಮೀಟರ್‌ಗಳಲ್ಲಿ ಸೆಕ್ಷನಲ್ ವೇಗವನ್ನು 110 ಕಿ.ಮೀ.ಗೆ ಹೆಚ್ಚಿಸಲಾಗಿದ್ದು, 15 ನಿಲ್ದಾಣಗಳಲ್ಲಿ ಲೂಪ್ ಲೈನ್ ವೇಗವನ್ನು 30 ಕಿಮೀಗೆ ಹೆಚ್ಚಿಸಲಾಗಿದೆ ಎಂದರು.
4 ರಸ್ತೆ ಮೇಲ್ಸೇತುವೆ, 5 ರಸ್ತೆ ಕೆಳಸೇತುವೆ ಗಳು, 7 ಪಾದಚಾರಿ ಮೇಲ್ಸೇತುವೆಗಳು, 1 ಸಬ್‌ವೇ ಮತ್ತು 15 ಉನ್ನತ ಎತ್ತರದ ಪ್ಲಾಟ್‌ಫಾರ್ಮ್‌ಗಳನ್ನು ಪೂರ್ಣಗೊಳಿಸಲಾಗಿದೆ. 126 ನಿಲ್ದಾಣಗಳಲ್ಲಿ ದಿವ್ಯಾಂಗಜನ ಸ್ನೇಹಿ ಸೌಲಭ್ಯಗಳನ್ನು ಒದಗಿಸಲಾಗಿದೆ. ಡಿಸೆಂಬರ್ 2025 ರ ವರೆಗೆ 78 ಲಿಫ್ಟ್‌ಗಳು ಮತ್ತು 62 ಎಸ್ಕಲೇಟರ್‌ಗಳನ್ನು ಕಾರ್ಯನಿಯೋಜನೆಗೊಳಿಸಲಾಗಿದೆ ಎಂದರು.
ರೈಲ್ವೆ ರಕ್ಷಣಾ ದಳವು ʼಆಪರೇಷನ್ ನನ್ಹೆ ಫರಿಶ್ತೆʼ ಅಡಿಯಲ್ಲಿ,487 ಮಕ್ಕಳು ಮತ್ತು 54 ಅಸಹಾಯಕ ವಯಸ್ಕರನ್ನು ರಕ್ಷಿಸಿದೆ. ಟಿಕೆಟ್ ದಲ್ಲಾಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ 206 ಅಪರಾಧಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದ್ದು 5.7 ಲಕ್ಷ ರೂಪಾಯಿಗಳ ಮೌಲ್ಯದ ಟಿಕೆಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ₹15 ಲಕ್ಷ ಮೌಲ್ಯದ ಕಳುವಾದ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ನೈಋತ್ಯ ರೈಲ್ವೆಯ 164 ನಿಲ್ದಾಣಗಳಲ್ಲಿ 2,179 ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆಯ ಮೂಲಕ ಕಣ್ಗಾವಲು ಹೆಚ್ಚಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ರೈಲ್ವೆ ರಕ್ಷಣಾ ಪಡೆಯಿಂದ ಶ್ವಾನ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

