Fri. Mar 6th, 2026

ಯಲಹಂಕದ ಒಂದೇ ಸ್ಥಳದಲ್ಲಿ 24 ಮಠಗಳಿಗೆ ಜಾಗ; ಶಾಸಕ ವಿಶ್ವನಾಥ್ ಕಾರ್ಯಕ್ಕೆ ಮಾದಾರ ಚೆನ್ನಯ್ಯ ಶ್ರೀ ಶ್ಲಾಘನೆ

Share this with Friends

ಯಲಹಂಕ: ಸಾಮಾಜಿಕ ಸಮಾನತೆ ಹಾಗೂ ಧರ್ಮ ಸಂರಕ್ಷಣೆಯ ನಿಟ್ಟಿನಲ್ಲಿ ಯಲಹಂಕ ಕ್ಷೇತ್ರವು ರಾಜ್ಯಕ್ಕೇ ಮಾದರಿಯಾಗುವಂತಹ ಮಹತ್ತರ ಹೆಜ್ಜೆಯನ್ನಿಟ್ಟಿದೆ. ಕ್ಷೇತ್ರದ ರಾವುತ್ತನಹಳ್ಳಿ ಗ್ರಾಮದಲ್ಲಿ 24 ಹಿಂದುಳಿದ ಹಾಗೂ ದಲಿತ ಸಮುದಾಯಗಳ ಮಠಗಳಿಗೆ ಭೂಮಿ ಮಂಜೂರು ಮಾಡುವ ಮೂಲಕ ಶಾಸಕ ಎಸ್.ಆರ್. ವಿಶ್ವನಾಥ್ ಅವರು ಹೊಸ ಇತಿಹಾಸ ಬರೆದಿದ್ದಾರೆ.

ಈ ಐತಿಹಾಸಿಕ ಕಾರ್ಯಕ್ಕಾಗಿ ಕೃತಜ್ಞತೆ ಸಲ್ಲಿಸಲು ಸೋಮವಾರ ಬೆಳಿಗ್ಗೆ 24 ಮಠಗಳ ಮಠಾಧೀಶರು ಶಾಸಕರ ನಿವಾಸಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಎಸ್.ಆರ್. ವಿಶ್ವನಾಥ್ ಹಾಗೂ ಅವರ ಕುಟುಂಬಸ್ಥರನ್ನು ಆಶೀರ್ವದಿಸಿ, ಅಭಿನಂದನೆ ಸಲ್ಲಿಸಲಾಯಿತು.

ಐತಿಹಾಸಿಕ ನಿರ್ಧಾರಕ್ಕೆ ಶ್ರೀಗಳ ಪ್ರಶಂಸೆ:

ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, “ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ದಲಿತ ಮತ್ತು ಹಿಂದುಳಿದ ವರ್ಗಗಳ 24 ಮಠಗಳಿಗೆ ಒಂದೇ ಕಡೆ ಭೂಮಿ ನೀಡಿರುವುದು ಅಭೂತಪೂರ್ವ ಸಂಗತಿ. ಧರ್ಮದ ರಕ್ಷಣೆ ಮತ್ತು ಸಮಾಜದ ಏಳಿಗೆಗಾಗಿ ಶಾಸಕರು ತೋರಿರುವ ಈ ಉದಾತ್ತ ಗುಣ ಶ್ಲಾಘನೀಯ. ಅವರ ಈ ಸೇವೆಯನ್ನು ಗುರುತಿಸಿ ದೇವರು ಅವರಿಗೆ ಉತ್ತಮ ಆರೋಗ್ಯ ಮತ್ತು ಅಧಿಕಾರ ಕರುಣಿಸಲಿ” ಎಂದು ಹರಸಿದರು.

ಸಮಾಜದ ಸೇವೆಗೆ ಸಂದ ಗೌರವ:

ಮಠಾಧೀಶರ ಆಶೀರ್ವಾದ ಪಡೆದ ನಂತರ ಮಾತನಾಡಿದ ಶಾಸಕ ಎಸ್.ಆರ್. ವಿಶ್ವನಾಥ್, “ರಾಜ್ಯದ ಶೈಕ್ಷಣಿಕ ಮತ್ತು ಸಾಮಾಜಿಕ ಸುಧಾರಣೆಯಲ್ಲಿ ಮಠಮಾನ್ಯಗಳ ಕೊಡುಗೆ ಅನನ್ಯವಾಗಿದೆ. ನಮ್ಮ ಕ್ಷೇತ್ರದಲ್ಲಿ 24 ಮಠಗಳಿಗೆ ಒಂದೇ ಕಡೆ ಆಶ್ರಯ ಸಿಕ್ಕಿರುವುದು ಈ ಭಾಗದ ಪುಣ್ಯ. ಈ ಮಠಗಳ ಮೂಲಕ ಧರ್ಮ, ಸಂಸ್ಕೃತಿ ಮತ್ತು ಶಿಕ್ಷಣದ ಬೆಳವಣಿಗೆಯಾಗಿ ಸಮಾಜಕ್ಕೆ ಒಳಿತಾಗಲಿ ಎಂಬುದು ನನ್ನ ಆಶಯ,” ಎಂದರು.

ಇದೇ ಸಂದರ್ಭದಲ್ಲಿ ಶಾಸಕರ ಕುಟುಂಬದ ವತಿಯಿಂದ ಎಲ್ಲಾ ಮಠಾಧೀಶರನ್ನು ಗೌರವಪೂರ್ವಕವಾಗಿ ಸನ್ಮಾನಿಸಿ, ‘ಗುರುವಂದನೆ’ ಅರ್ಪಿಸಲಾಯಿತು. ಮಠಾಧೀಶರ ಈ ಭೇಟಿಯು ಯಲಹಂಕ ಕ್ಷೇತ್ರದಲ್ಲಿ ಭಕ್ತಿ ಮತ್ತು ಸಾಮಾಜಿಕ ಸೌಹಾರ್ದತೆಯ ವಾತಾವರಣವನ್ನು ನಿರ್ಮಿಸಿತ್ತು.


Share this with Friends

Related Post