ಬೆಂಗಳೂರು: ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರದ ದುರಾಡಳಿತವನ್ನು ಜನರ ಗಮನಕ್ಕೆ ತರುವ ಮೂಲಕ ಮುಂಬರಲಿರಬ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಕಡೆ ವಿಶೇಷವಾದ ಗಮನ ಕೊಡಲು ತೀರ್ಮಾನ ಮಾಡಿದ್ದೇವೆ ಎಂದು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿಯ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಮಾಧ್ಯಮ ಪ್ರತಿನಿಧಿಗಳಗಳ ಜೊತೆ ಮಾತನಾಡಿದ ಅವರು, ಸಂಘಟನೆಯನ್ನು ಬಲಪಡಿಸುವ ದೃಷ್ಟಿಯಿಂದ ಇವತ್ತಿನಿಂದ ರಾಜ್ಯಾಧ್ಯಕ್ಷರು ಮತ್ತು ಎಲ್ಲ ಪ್ರಮುಖರು ಸೇರಿ ಪ್ರತಿ ಜಿಲ್ಲಾ ಪ್ರಮುಖರ ಸಮಾವೇಶವನ್ನು ಮಾಡುತ್ತಿದ್ದೇವೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆಯೂ ಚರ್ಚಿಸುತ್ತಿದ್ದೇವೆ. ಈ ಸರಕಾರದ ದುರಾಡಳಿತವನ್ನು ಜನರ ಗಮನಕ್ಕೆ ತರುವ ಮೂಲಕ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಕಡೆ ವಿಶೇಷವಾದ ಗಮನ ಕೊಡಲು ತೀರ್ಮಾನ ಮಾಡಿದ್ದೇವೆ ಎಂದರು.
ಸಿದ್ದರಾಮಯ್ಯನವರು ಅತಿ ಹೆಚ್ಚು ದಿನಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ದಾಖಲೆ ಮಾಡಿದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ದೇವರಾಜ ಅರಸು ಅವರ ಆಡಳಿತ ವೈಖರಿಯೇ ಬೇರೆ; ಇವರ ಆಡಳಿತ ವೈಖರಿಯೇ ಬೇರೆ. ಅವರ ಜೊತೆ ಇವರನ್ನು ಹೋಲಿಸಲಾಗದು. ಈ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿರುವ ಈ ಸಂದರ್ಭದಲ್ಲಿ ಸಮಾವೇಶದ ಮೂಲಕ ಸಾಧನೆ ಮಾಡುವುದಾಗಿ ಹೊರಟಿರುವುದನ್ನು ಜನರು ಮೆಚ್ಚುವುದಿಲ್ಲ. ಈಗಾಗಲೇ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಪಡೆಯುತ್ತಿದೆ ಎಂದು ತಿಳಿಸಿದರು.
ಮುಂದಿನ ಚುನಾವಣೆಯಲ್ಲೂ ನಾವು ನಿಶ್ಚಿತವಾಗಿ ದೊಡ್ಡ ಬಹುಮತದೊಂದಿಗೆ ಬಿಜೆಪಿ ಸರಕಾರ ರಚಿಸಬೇಕೆಂಬ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇವೆ. ನಮ್ಮ ಕಾರ್ಯಕರ್ತರೂ ತುಂಬ ಉತ್ಸಾಹದಿಂದ ಮುಂದೆ ಬಂದಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ಗೆಲುವು ಸಾಧಿಸುವುದನ್ನು ತಾವು ಗಮನಿಸಲಿದ್ದೀರಿ ಎಂದು ವಿಶ್ವಾಸದಿಂದ ನುಡಿದರು.

