ಮೈಸೂರು, ಮಾ.8: ಮಹಾಶಿವರಾತ್ರಿ ಪ್ರಯುಕ್ತ ಮೈಸೂರಿನ ಹಲವು ಶಿವ ದೇವಾಲಯಗಳಲ್ಲಿ ಇಂದು ಮುಂಜಾನೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.
ಮೈಸೂರು ಅರಮನೆ ಆವರಣದಲ್ಲಿರುವ ತ್ರಿನೇಶ್ವರ ದೇವಾಲಯ, ರಾಮಾನುಜ ರಸ್ತೆಯಲ್ಲಿರುವ ಕಾಮ ಕಾಮೇಶ್ವರಿ ದೇವಾಲಯ, ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿನ ಶಿವ ದೇವಾಲಯ, ಒಂಟಿಕೊಪ್ಪಲಿನಲ್ಲಿರುವ ಚಂದ್ರಮೌಳೇಶ್ವರ ದೇವಸ್ಥಾನ, ರಾಮಕೃಷ್ಣ ನಗರದಲ್ಲಿರುವ ಶಿವ ದೇವಾಲಯ, ಧನ್ವಂತರಿ ರಸ್ತೆಯಲ್ಲಿರುವ ಚಿದಂಬರ ದೇವಸ್ಥಾನ,ಸಿದ್ದಾರ್ಥ ನಗರದ ಡೈರಿ ರಸ್ತೆಯಲ್ಲಿರುವ ಮಂಜುನಾಥ ದೇವಾಲಯ ಸೇರಿದಂತೆ ನಗರದ ಹಲವು ಕಡೆ ಶಿವ ದೇವಾಲಯಗಳಲ್ಲಿ ವಿಶೇಷ ಅಭಿಷೇಕ, ಅಲಂಕಾರ ನೆರವೇರಿತು.
ಬೆಳಗಿನಿಂದಲೇ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ಪೂಜಾ ಶಿವನ ದರ್ಶನ ಪಡೆದು ಪುನೀತರಾದರು.ಎಲ್ಲೆಡೆ ಭಕ್ತಸಾಗರ ಹರಿದು ಬಂದಿತ್ತು.
ಅರಮನೆ ಆವರಣದಲ್ಲಿರುವ ತ್ರಿನೇಶ್ವರ ನಿಗೆ ಇಂದು ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಿ ಜಯಚಾಮರಾಜೇಂದ್ರ ಒಡೆಯರ್ ರವರು ನೀಡಿದ್ದ 11 ಕೆಜಿ ತೂಕದ ಅಪರಂಜಿ ಚಿನ್ನದ ಕೊಳಗವನ್ನು ಶಿವನಿಗೆ ಅರ್ಪಿಸಿ ಪೂಜೆ ಸಲ್ಲಿಸಲಾಯಿತು.ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.
ಶಿವರಾತ್ರಿ ಪ್ರಯುಕ್ತ ಮೈಸೂರಿನಾದ್ಯಂತ ಮುಂಜಾಗ್ರತ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.