ಬೆಳಗಾವಿ ಸುವರ್ಣ ವಿಧಾನಸೌಧ:ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು,ಸ್ಥಳೀಯ ಕಲೆಗಳನ್ನು, ಉಳಿಸಿ ಬೆಳೆಸುವ ಉದ್ದೇಶದಿಂದ ಚಿತ್ರದುರ್ಗ, ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ದೊಡ್ಡ ಮಟ್ಟದಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದ್ದು, ದಿನಾಂಕಗಳನ್ನು ಶೀಘ್ರ ನಿಗದಿಪಡಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ಎಸ್ ತಂಗಡಗಿ ತಿಳಿಸಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲದ ಅಧಿವೇಶನದಲ್ಲಿ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ಶಾಸಕ ಡಾ. ಅಶ್ವತ್ಥ ನಾರಾಯಣ ಸಿ.ಎನ್. ಅವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರಸ್ತುತ ಕಷ್ಟದ ಪರಿಸ್ಥಿತಿಯಲ್ಲಿರುವ 11,154 ಕಲಾವಿದರು, ಸಾಹಿತಿಗಳಿಗೆ ತಿಂಗಳಿಗೆ ರೂ. 2500 ರಂತೆ ಮಾಸಾಶನ ನೀಡಲಾಗುತ್ತಿದೆ. ಅಲ್ಲದೆ 410 ಜನ ಮೃತ ಕಲಾವಿದರ ಪತ್ನಿಯರಿಗೂ ಮಾಸಿಕ 500 ರೂ. ಮಾಸಾಶನ ಪಾವತಿಸಲಾಗುತ್ತಿದೆ. ಪ್ರಸಕ್ತ ವರ್ಷದ ನವೆಂಬರ್ ತಿಂಗಳಿನವರೆಗೂ ಮಾಸಾಶನ ಪಾವತಿಸಲಾಗಿದೆ. ಮಾಸಾಶನ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದ 1896 ಕಲಾವಿದರು, ಸಾಹಿತಿಗಳಿಗೂ ಕೂಡ ಮಾಸಾಶನ ಮಂಜೂರು ಮಾಡಲಾಗಿದೆ ಎಂದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿ, ಈ ಹಿಂದೆ ಜಿಲ್ಲೆಗಳಲ್ಲಿ ಜಾನಪದ ಜಾತ್ರೆ ಕಾರ್ಯಕ್ರಮಗಳನ್ನು ಏರ್ಪಡಿಸಿ, ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ನೀಡಲಾಗುತ್ತಿತ್ತು, ಈ ಕಾರ್ಯಕ್ರಮವನ್ನು ಮುಂದುವರೆಸುವಂತೆ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಸಚಿವ ಶಿವರಾಜ್ ತಂಗಡಗಿ, ಜಾನಪದ ಜಾತ್ರೆ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿಲ್ಲ. ಈ ವರ್ಷ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು, ಸ್ಥಳೀಯ ಕಲೆಗಳನ್ನು, ಉಳಿಸಿ ಬೆಳೆಸುವ ಉದ್ದೇಶದಿಂದ ಚಿತ್ರದುರ್ಗ, ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ದೊಡ್ಡ ಮಟ್ಟದಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದ್ದು, ದಿನಾಂಕಗಳನ್ನು ಶೀಘ್ರ ನಿಗದಿಪಡಿಸಲಾಗುವುದು ಎಂದರು.
ಮಂಗಳೂರಿನಲ್ಲಿಯೂ ಕಾರ್ಯಕ್ರಮ ಆಯೋಜಿಸಬೇಕು ಎಂದು ಸ್ಪೀಕರ್ ಯು.ಟಿ. ಖಾದರ್ ಮನವಿಗೆ ಸ್ಪಂದಿಸಿದ ಸಚಿವರು, ಮಂಗಳೂರಿನಲ್ಲಿಯೂ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದು ಭರವಸೆ ನೀಡಿದರು.
ವಿದ್ಯಾರ್ಥಿ ನಿಲಯಕ್ಕೆ ಹೊಸ ಕಟ್ಟಡ:
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಉತ್ತಮ ವ್ಯಾಸಂಗದ ಹಿತದೃಷ್ಟಿಯಿಂದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಕ್ರಮ ವಹಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್. ತಂಗಡಗಿ ತಿಳಿಸಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಹೊಳೆನರಸೀಪುರ ಶಾಸಕ ಹೆಚ್.ಡಿ ರೇವಣ್ಣ ಅವರು ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಉತ್ತಮ ವ್ಯಾಸಂಗದ ಹಿತದೃಷ್ಟಿಯಿಂದ ವಿದ್ಯಾರ್ಥಿ ವಸತಿ ನಿಲಯಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡುವಂತೆ ಕೋರಿದ ಪ್ರಶ್ನೆಗೆ 2024-25ನೇ ಸಾಲಿನಲ್ಲಿ ಮಂಜೂರಾಗಿರುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಸ್ವಂತ ಕಟ್ಟಡ ನಿರ್ಮಾಣವನ್ನು ಲೋಕೋಪಯೋಗಿ ಇಲಾಖೆ, ಹಾಸನ ಇವರ ಮೂಲಕ ಕೈಗೊಳ್ಳಲಾಗಿದೆ. ಈಗಾಗಲೇ 2.50ಕೋಟಿ ರೂ.ಗಳನ್ನು ಹಾಸನ ಜಿಲ್ಲಾಧಿಕಾರಿಗಳ ಖಾತೆಗೆ ಬಿಡುಗಡೆ ಮಾಡಲಾಗಿರುತ್ತದೆ. ಕಟ್ಟಡ ನಿರ್ಮಾಣ ಕಾಮಗಾರಿಯು ಪ್ರಗತಿಯಲ್ಲಿದ್ದು ಆದಷ್ಟು ಶೀಘ್ರವಾಗಿ ಕಟ್ಟಡ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲಾಗುವುದು ಎಂದು ಸದನದಲ್ಲಿ ಉತ್ತರಿಸಿದರು.

