ಬೆಂಗಳೂರು: ರಾಜ್ಯದಾದ್ಯಂತ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಇಂದಿನಿಂದ (ಮಾರ್ಚ್ 18) ಅತ್ಯಂತ ಶಿಸ್ತುಬದ್ಧವಾಗಿ ಆರಂಭಗೊಂಡಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್. ಮಧು ಬಂಗಾರಪ್ಪ ಅವರು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಗೆ (ಕೆಪಿಎಸ್) ಭೇಟಿ ನೀಡಿ, ಪರೀಕ್ಷಾ ಸಿದ್ಧತೆಗಳನ್ನು ಪರಿಶೀಲಿಸಿದರು.ಗುಲಾಬಿ ಹೂ ನೀಡಿ ಮಕ್ಕಳನ್ನು ಪರೀಕ್ಷಾ ಕೇಂದ್ರಗಳಿಗೆ ಸ್ವಾಗತಿಸಿದರು.
ನಂತರ ಪರೀಕ್ಷಾ ಕೊಠಡಿಗಳಿಗೆ ಭೇಟಿ ನೀಡಿದ ಸಚಿವರು, ಪರೀಕ್ಷೆ ಬರೆಯಲು ಸಜ್ಜಾಗಿದ್ದ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದರು. “ಯಾವುದೇ ಭಯ ಅಥವಾ ಆತಂಕವಿಲ್ಲದೆ ಪರೀಕ್ಷೆಯನ್ನು ಎದುರಿಸಿ. ಪೋಷಕರು ಕೂಡ ಮಕ್ಕಳ ಮೇಲೆ ಹೆಚ್ಚಿನ ಒತ್ತಡ ಹೇರಬಾರದು. ಈಗಾಗಲೇ ಮೂರು ಪೂರ್ವಸಿದ್ಧತಾ ಪರೀಕ್ಷೆಗಳನ್ನು ನಡೆಸಿರುವುದರಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿದೆ,” ಎಂದು ಅವರು ಕಿವಿಮಾತು ಹೇಳಿದರು. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ಸುದ್ದಿಗಳಿಗೆ ಕಿವಿಗೊಡದಂತೆ ವಿದ್ಯಾರ್ಥಿಗಳಿಗೆ ಎಚ್ಚರಿಸಿದರು.
ಈ ಬಾರಿಯ ಪರೀಕ್ಷಾ ಅಂಕಿ-ಅಂಶಗಳು:
ಒಟ್ಟು ವಿದ್ಯಾರ್ಥಿಗಳು: 8,65,988
ಪರೀಕ್ಷಾ ಕೇಂದ್ರಗಳು: 2,870
ಸರ್ಕಾರಿ ಶಾಲೆಗಳ ಮಕ್ಕಳು: 3,59,594
ಅನುದಾನಿತ ಶಾಲೆಗಳ ಮಕ್ಕಳು: 2,11,486
ಅನುದಾನರಹಿತ ಶಾಲೆಗಳ ಮಕ್ಕಳು: 2,94,908
ತಂತ್ರಜ್ಞಾನದ ಬಳಕೆ ಮತ್ತು ಭದ್ರತೆ:
ಈ ವರ್ಷದ ಪರೀಕ್ಷೆಯಲ್ಲಿ 16 ಮಂದಿ ದೃಷ್ಟಿಮಾಂದ್ಯ ವಿದ್ಯಾರ್ಥಿಗಳು ಬರಹಗಾರರ (Scribes) ಸಹಾಯವಿಲ್ಲದೆ, ಸ್ವತಃ ಲ್ಯಾಪ್‌ಟಾಪ್ ಬಳಸಿ ಪರೀಕ್ಷೆ ಬರೆಯುತ್ತಿರುವುದು ವಿಶೇಷ ಸಾಧನೆಯಾಗಿದೆ. ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಲು ಎಲ್ಲಾ ಕೇಂದ್ರಗಳಲ್ಲಿ ‘ವೆಬ್‌ಕಾಸ್ಟಿಂಗ್’ ಮೂಲಕ ಹದ್ದಿನ ಕಣ್ಣಿಡಲಾಗಿದೆ. ಪೊಲೀಸ್ ಭದ್ರತೆಯೊಂದಿಗೆ ಪ್ರಶ್ನೆಪತ್ರಿಕೆಗಳನ್ನು ಸುರಕ್ಷಿತವಾಗಿ ವಿತರಿಸಲಾಗುತ್ತಿದ್ದು, ಸುಗಮ ಪರೀಕ್ಷೆಗಾಗಿ ಜಿಲ್ಲಾಡಳಿತಗಳು ಸನ್ನದ್ಧವಾಗಿವೆ.

