Tue. Mar 17th, 2026

ನಾಳೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ: 8.65 ಲಕ್ಷ ವಿದ್ಯಾರ್ಥಿಗಳಿಗೆ ಸಿಎಂ ಸಿದ್ದರಾಮಯ್ಯ ಶುಭ ಹಾರೈಕೆ

Share this with Friends

ಬೆಂಗಳೂರು: ರಾಜ್ಯಾದ್ಯಂತ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ (SSLC) ವಾರ್ಷಿಕ ಪರೀಕ್ಷೆಗಳು ಮಾರ್ಚ್ 18ರಿಂದ ಆರಂಭವಾಗುತ್ತಿದ್ದು, ಪರೀಕ್ಷೆಗೆ ಹಾಜರಾಗುತ್ತಿರುವ 8,65,968 ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ಶುಭಾಶಯ ಕೋರಿದ್ದಾರೆ.

ಈ ಬಾರಿ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರಲಾಗಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮೂರು ಹಂತಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಒಂದು ವೇಳೆ ಮೊದಲ ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶ ಬಾರದಿದ್ದರೂ ಅಥವಾ ಅನುತ್ತೀರ್ಣರಾದರೂ, ವಿದ್ಯಾರ್ಥಿಗಳಿಗೆ 2ನೇ ಮತ್ತು 3ನೇ ಹಂತದ ಪರೀಕ್ಷೆ ಬರೆಯಲು ಮುಕ್ತ ಅವಕಾಶವಿದೆ. “ಯಾವುದೇ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗದೆ, ಧೈರ್ಯದಿಂದ ಪರೀಕ್ಷೆಯನ್ನು ಎದುರಿಸಿ ಯಶಸ್ವಿಯಾಗಬೇಕು” ಎಂದು ಮುಖ್ಯಮಂತ್ರಿಗಳು ಕಿವಿಮಾತು ಹೇಳಿದ್ದಾರೆ.

ಇದೇ ವೇಳೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಾತನಾಡಿ, “ಹಿಂದೆ ಮಕ್ಕಳು ತೀವ್ರ ಒತ್ತಡದಲ್ಲಿ ಪರೀಕ್ಷೆ ಬರೆಯುತ್ತಿದ್ದರು. ಈಗ ಜಾರಿಗೆ ತಂದಿರುವ ಸುಧಾರಣೆಗಳಿಂದ ಪರೀಕ್ಷಾ ಭಯ ದೂರವಾಗಿದೆ. ವಿದ್ಯಾರ್ಥಿಗಳು ನಿರಾಳವಾಗಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಲಿ” ಎಂದು ಹಾರೈಸಿದರು.

ಪೋಷಕರಿಗೆ ಆರ್. ಅಶೋಕ್ ಕಿವಿಮಾತು:

ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ವಿದ್ಯಾರ್ಥಿಗಳಿಗೆ ಶುಭ ಕೋರುತ್ತಾ, ಪರೀಕ್ಷಾ ಸಮಯದಲ್ಲಿ ಪೋಷಕರು ಮಕ್ಕಳಿಗೆ ಮಾನಸಿಕ ಒತ್ತಡ ಅಥವಾ ಹಿಂಸೆ ನೀಡಬಾರದು ಎಂದು ಮನವಿ ಮಾಡಿದರು. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪ್ರಶ್ನೆಪತ್ರಿಕೆ ಸೋರಿಕೆ ವದಂತಿಗಳ ಬಗ್ಗೆ ಶಿಕ್ಷಣ ಸಚಿವರು ತಕ್ಷಣವೇ ಸ್ಪಷ್ಟನೆ ನೀಡಿ, ಗೊಂದಲ ನಿವಾರಿಸಬೇಕು ಎಂದು ಅವರು ಒತ್ತಾಯಿಸಿದರು.

ನಾಳೆಯಿಂದ ಆರಂಭವಾಗುವ ಪರೀಕ್ಷೆಗೆ ಶಿಕ್ಷಣ ಇಲಾಖೆಯು ರಾಜ್ಯಾದ್ಯಂತ ಬಿಗಿ ಬಂದೋಬಸ್ತ್ ಹಾಗೂ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ.

 


Share this with Friends

Related Post