Fri. Mar 6th, 2026

ಶಿವಮೊಗ್ಗದಲ್ಲಿ ಜಗಳ ಬಿಡಿಸಲು ಹೋದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸಾವು; ಕುಟುಂಬಕ್ಕೆ ₹15 ಲಕ್ಷ ಪರಿಹಾರ ಘೋಷಣೆ

Share this with Friends

ಶಿವಮೊಗ್ಗ: ನಗರದ ಹೊರವಲಯದ ಸೂಳೆಬೈಲು ಬಡಾವಣೆಯಲ್ಲಿ ಸೋಮವಾರ ರಾತ್ರಿ ಘಟಿಸಿದ ದಾರುಣ ಘಟನೆಯೊಂದರಲ್ಲಿ, 10ನೇ ತರಗತಿ ವಿದ್ಯಾರ್ಥಿಯೊಬ್ಬ ಜಗಳ ಬಿಡಿಸಲು ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ. ಮೃತ ವಿದ್ಯಾರ್ಥಿಯನ್ನು ಉರುಗಡೂರು ಸರ್ಕಾರಿ ಪ್ರೌಢಶಾಲೆಯ ಸಂಕೇತ್ (16) ಎಂದು ಗುರುತಿಸಲಾಗಿದೆ.

ಘಟನೆಯ ವಿವರ:

ಸಂಕೇತ್ ಸೋಮವಾರ ರಾತ್ರಿ ಶಾಲೆಯಲ್ಲಿ ವಿಶೇಷ ತರಗತಿ ಮುಗಿಸಿ ಮನೆಗೆ ಮರಳುತ್ತಿದ್ದಾಗ, ಶಾಲೆಯ ಆವರಣದ ಬಳಿ ವಿದ್ಯಾರ್ಥಿಗಳ ಗುಂಪಿನ ನಡುವೆ ಗಲಾಟೆ ನಡೆಯುತ್ತಿತ್ತು. ತನ್ನ ಸ್ನೇಹಿತ ಗಿರೀಶ್ ಎಂಬಾತನ ಮೇಲೆ ಅನ್ಯಕೋಮಿನ ಕೆಲ ಅಪ್ರಾಪ್ತರು ಹಲ್ಲೆ ನಡೆಸುತ್ತಿರುವುದನ್ನು ಕಂಡು, ಸಂಕೇತ್ ಜಗಳ ಬಿಡಿಸಲು ಮಧ್ಯಪ್ರವೇಶಿಸಿದ್ದಾನೆ. ಈ ವೇಳೆ ಆಕ್ರೋಶಗೊಂಡ ಆರೋಪಿಗಳು ಸಂಕೇತ್‌ನ ಎದೆ ಮತ್ತು ಹೊಟ್ಟೆಯ ಭಾಗಕ್ಕೆ ಬಲವಾಗಿ ಗುದ್ದಿದ್ದಾರೆ. ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಕುಸಿದು ಬಿದ್ದ ಸಂಕೇತ್‌ನನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆತ ಚಿಕಿತ್ಸೆ ಫಲಕಾರಿಯಾಗದೆ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಪೊಲೀಸ್ ಕಾರ್ಯಾಚರಣೆ:

ಘಟನೆಗೆ ಸಂಬಂಧಿಸಿದಂತೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈಗಾಗಲೇ ಇಬ್ಬರು ಅಪ್ರಾಪ್ತ ಬಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಸೂಳೆಬೈಲು ಮತ್ತು ಉರುಗಡೂರು ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. “ಪ್ರಕರಣದ ತನಿಖೆ ಮುಂದುವರಿದಿದ್ದು, ಶಾಂತಿ ಕಾಪಾಡುವಂತೆ ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ತಿಳಿಸಿದ್ದಾರೆ.

ಪರಿಹಾರ ಘೋಷಣೆ:

ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ರಾಜ್ಯ ಸರ್ಕಾರವು ಒಟ್ಟು 15 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 10 ಲಕ್ಷ ರೂಪಾಯಿ ಹಾಗೂ ಶಿಕ್ಷಣ ಇಲಾಖೆಯಿಂದ 5 ಲಕ್ಷ ರೂಪಾಯಿಗಳನ್ನು ನೀಡಲಾಗುವುದು ಎಂದು ಜಿಲ್ಲಾಡಳಿತ ಪ್ರಕಟಿಸಿದೆ.

ಆಕ್ರೋಶ:

ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಸಂಕೇತ್‌ನ ಅಕಾಲಿಕ ನಿಧನಕ್ಕೆ ಸ್ಥಳೀಯರು ಮತ್ತು ಶಾಲಾ ಸಿಬ್ಬಂದಿ ತೀವ್ರ ಕಂಬನಿ ಮಿಡಿದಿದ್ದಾರೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿವೆ.

ಶಾಸಕರ ಭೇಟಿ:

ಘಟನೆ ನಡೆದ ಬೆನ್ನಲ್ಲೇ ಮೃತನ ನಿವಾಸಕ್ಕೆ ಭೇಟಿ ನೀಡಿದ ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ, ಕುಟುಂಬದವರಿಗೆ ಧೈರ್ಯ ತುಂಬಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಇದು ಅತ್ಯಂತ ದುರದೃಷ್ಟಕರ ಮತ್ತು ಅಮಾನವೀಯ ಘಟನೆ. ಓದುವ ವಯಸ್ಸಿನ ಬಾಲಕನ ಪ್ರಾಣ ಹೋಗಿರುವುದು ಇಡೀ ಸಮಾಜಕ್ಕೆ ನೋವು ತಂದಿದೆ. ಇಂತಹ ಕೃತ್ಯ ಎಸಗಿದ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರಲಾಗುವುದು,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕುಟುಂಬಕ್ಕೆ ಗರಿಷ್ಠ ಮಟ್ಟದ ನೆರವು ಒದಗಿಸುವುದಾಗಿ ಭರವಸೆ ನೀಡಿದರು

 


Share this with Friends

Related Post